ಈ ಬಾರಿಯ ಶಿಕ್ಷಕರ ದಿನಾಚರಣೆಯಂದು ಶಿಡ್ಲಘಟ್ಟ ತಾಲ್ಲೂಕಿನ ಐವರು ಶಿಕ್ಷಕರಿಗೆ ಪ್ರಶಸ್ತಿ ಲಭಿಸುತ್ತಿದೆ. ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್ ಅವರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ, ಅಮ್ಮಗಾರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಎಚ್.ಜಿ.ಚಂದ್ರಕಲಾ ಅವರಿಗೆ ‘ವೈಜ್ಞಾನಿಕ ಕ್ಷೇತ್ರದಲ್ಲಿ ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿದೆ. ಇವರೊಂದಿಗೆ ತಾಲ್ಲೂಕಿನ ಮೂವರು ಶಿಕ್ಷಕರು ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಟಿ.ವೆಂಕಟಾಪುರ ಶಾಲೆಯ ಶಿಕ್ಷಕ ಸಿ.ವೆಂಕಟರೆಡ್ಡಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಳ್ಳೂರು ಶಾಲೆಯ ಎಂ.ಸೀನಪ್ಪ ಮತ್ತು ಪ್ರೌಢಶಾಲೆಯ ವಿಭಾಗದಲ್ಲಿ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಜಿ.ಎನ್.ಶಿವಣ್ಣ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.
ಶಿಕ್ಷಕ ಸಿ.ವೆಂಕಟರೆಡ್ಡಿ :
2002 ರಿಂದ ತಾಲ್ಲೂಕಿನ ಕುಪ್ಪೇನಹಳ್ಳಿ, ಚೀಮಂಗಲ, ಗೌಡನಹಳ್ಳಿ, ಆನೆಮಡುಗು, ಬೈಯಪ್ಪನಹಳ್ಳಿ, ಗಾಂಡ್ಲಚಿಂತೆ, ಚಿಕ್ಕದಿಬ್ಬೂರಹಳ್ಳಿ, ಇಲಾಹಿನಗರ, ಇದ್ಲೂಡು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರತ ಸೇವಾದಳ ಜಿಲ್ಲಾ ಸಹಸಂಘಟಕರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಟಿ.ವೆಂಕಟಾಪುರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜನಪದ, ದೇಶಭಕ್ತಿ, ಭಾವಗೀತೆ, ಯೋಗ ಕ್ರೀಡೆಗಳಲ್ಲಿ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ. ಬಾಂಗ್ಡಾ, ಏರೋಬಿಕ್ಸ್ ಮಕ್ಕಳಿಗೆ ಕಲಿಸುತ್ತಾರೆ.
ಶಿಕ್ಷಕ ಎಂ.ಸೀನಪ್ಪ :
ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಸೀನಪ್ಪ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯ ಕಲಾತಂಡದೊಮದಿಗೆ 30 ಹಳ್ಳಿಗಳಲ್ಲಿ ಬೀದಿ ನಾಟಕ ನಡೆಸಿಕೊಟ್ಟಿದ್ದಾರೆ. 26 ವರ್ಷಗಳಿಂದ ತಾಲ್ಲೂಕಿನ 11 ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ನಾಟಕೋತ್ಸವ, ಪ್ರತಿಭಾ ಕಾರಂಜಿ ಹಾಗೂ ಕ್ರೀಡೆಯಲ್ಲಿ ಬಹುಮಾನಗಳನ್ನು ಗೆದ್ದಿದ್ದಾರೆ. ದಾನಿಗಳ ನೆರವು ಪಡೆದು ಬಡ ಮಕ್ಕಳಿಗೆ ನೆರವನ್ನು ನೀಡುತ್ತಾರೆ.
ಶಿಕ್ಷಕ ಜಿ.ಎನ್.ಶಿವಣ್ಣ :
ನಗರದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಶಿಕ್ಷಕ ಜಿ.ಎನ್.ಶಿವಣ್ಣ 35 ವರ್ಷಗಳಿಂದ ಸಮಾಜ ವಿಜ್ಞಾನದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಮುಖ್ಯ ಶಿಕ್ಷಕರಾಗಿದ್ದಾರೆ. ಯೋಗ, ಸ್ವಚ್ಛಭಾರತ, ಆರೋಗ್ಯ ಸುಧಾರಣೆ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಾರೆ.
ಶಿಕ್ಷಕಿ ಎಚ್.ಜಿ.ಚಂದ್ರಕಲಾ :
ತಾಲ್ಲೂಕಿನ ಅಮ್ಮಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಹನ್ನೊಂದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಯೋಗಗಳ ಮೂಲಕ ವಿಜ್ಞಾನ ಬೋಧನೆ, ಪ್ರಾತ್ಯಕ್ಷಿಕೆಗಳ ತಯಾರಿ ಹಾಗೂ ವಿಜ್ಞಾನದ ಪ್ರಯೋಗಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ಪರಿಸರ ಸಂರಕ್ಷಣೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ.
ಶಿಕ್ಷಕ ಡಾ.ಎಂ.ಶಿವಕುಮಾರ್ :
ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ.ಶಿವಕುಮಾರ್, ಭವಿಷ್ಯದಲ್ಲಿ ಇಂಟರ್‌ನೆಟ್ ಆಧಾರಿತ ಮಕ್ಕಳ ಶಿಕ್ಷಣದ ಕುರಿತಂತೆ ಪ್ರಯೋಗಶೀಲರಾಗಿದ್ದಾರೆ. ಮಿಲೆನಿಯಮ್ ಜನರೇಷನ್ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಮೊಬೈಲ್ ಅಪ್ಲಿಕೇಷನ್‌ನಂತಹ ಸಲಕರಣೆಗಳ ಮೂಲಕವೇ ಶಿಕ್ಷಣ ನೀಡಿದರೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಮೂರು ಮೊಬೈಲ್ ಅಪ್ಲಿಕೇಷನ್‌ಗಳನ್ನು ರೂಪಿಸಿರುವ ಇವರು ಸರಳ ಗಣಿತ ಸೂತ್ರಗಳ ಕಲಿಕೆ ಸೇರಿದಂತೆ ಕಲಿಕಾ ಮಾಧ್ಯಮದ ಬಗ್ಗೆ ವೀಡಿಯೋ ಮೂಲಕ ಮಾಹಿತಿ ನೀಡುತ್ತಿದ್ದಾರೆ. 200ಕ್ಕೂ ಹೆಚ್ಚು ಸಾಫ್ಟ್ ಸ್ಕಿಲ್ ಟ್ರೈನಿಂಗ್ ಕುರಿತಂತೆ ತರಗತಿಗಳನ್ನು ಉಚಿತವಾಗಿ ರಜಾ ದಿನಗಳಲ್ಲಿ ನಡೆಸಿರುವ ಇವರು ಶಿಕ್ಷಕರಾಗಿ 14 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
- Advertisement -
- Advertisement -
- Advertisement -
- Advertisement -