ಶಿಡ್ಲಘಟ್ಟ ತಾಲ್ಲೂಕಿನ ಹುಜಗೂರು ಗ್ರಾಮದ ಪ್ರಗತಿಪರ ರೈತ ಎಂ.ರಾಮಯ್ಯ ಅವರಿಗೆ ರಾಜ್ಯ ಸರ್ಕಾರ ನೀಡುವ “ಕೃಷಿ ಪಂಡಿತ” ಪ್ರಶಸ್ತಿ ಲಭಿಸಿದೆ. ಹುಜಗೂರು ರಾಮಯ್ಯನವರು ಈ ಪ್ರಶಸ್ತಿ ಪಡೆಯುವುದರೊಂದಿಗೆ ತಾಲ್ಲೂಕಿನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದವರಲ್ಲಿ ನಾಲ್ಕನೆಯವರಾಗಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಕೃಷಿ ಇಲಾಖೆಯಿಂದ ನಡೆದ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿದ ಸಂದರ್ಭದಲ್ಲಿ ೨೦೧೬-೧೭ ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಯನ್ನು ಹುಜಗೂರು ರಾಮಯ್ಯ ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಶಿವಶಂಕರ ರೆಡ್ಡಿ ಪ್ರಧಾನ ಮಾಡಿದರು.
ದ್ರಾಕ್ಷಿ, ದಾಳಿಂಬೆ, ಗುಲಾಬಿ, ಪಾಲಿ ಹೌಸ್ ನಲ್ಲಿ ದೊಣ್ಣಮೆಣಸಿನಕಾಯಿ, ಆಲೂಗಡ್ಡೆ, ಕ್ಯಾರೆಟ್, ಟೊಮೆಟೋ, ಹೈನುಗಾರಿಕೆ ಸೇರಿದಂತೆ ಸಮಗ್ರ ಕೃಷಿ ಪದ್ಧತಿಯಲ್ಲಿ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಗೌರವಿಸಿದೆ.
ಹತ್ತನೇ ತರಗತಿಯವರೆಗೂ ಓದಿರುವ ಹುಜಗೂರು ರಾಮಯ್ಯನವರು ೨೩.೨೦ ಎಕರೆ ಜಮೀನನ್ನು ಹೊಂದಿದ್ದಾರೆ. ವಿವಿಧ ಬಗೆಯ ಆಧುನಿಕ ಕೃಷಿ ಉಪಕರಣಗಳನ್ನು ಅಳವಡಿಸಿಕೊಂಡಿದ್ದಾರೆ. ಸ್ಥಳೀಯ ಜಾತಿಯ ಎಮ್ಮೆ, ಎತ್ತು, ಕುರಿ ಮತ್ತು ಮೇಕೆ ಸಹ ಹೊಂದಿದ್ದಾರೆ. ಮುಖ್ಯ ಬೆಳೆಗಳಾಗಿ ದ್ರಾಕ್ಷಿ, ದಾಳಿಂಬೆ, ಆಲೂಗಡ್ಡೆ, ಕ್ಯಾರೆಟ್, ಟೊಮೆಟೋ, ರಾಗಿ, ಭತ್ತ, ಅವರೆ, ಹುಣಸೆ ಮತ್ತು ಗುಲಾಬಿ ಬೆಳೆಯುವರು.
ಕಡಿಮೆ ನೀರಿನಲ್ಲಿ ತುಂತುರು ನೀರಾವರಿಯನ್ನು ಬಳಸಿ ಏರೋಬಿಕ್ ಪದ್ಧತಿಯಲ್ಲಿ ಭತ್ತ ಬೆಳೆದು ಮಾದರಿಯಾಗಿದ್ದಾರೆ. ಕ್ಯಾಪ್ಸಿಕಮ್ ಬೆಳೆಯನ್ನು ತೆರೆದ ವಾತಾವರಣದಲ್ಲಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ರಕ್ಷಿತ ಕೃಷಿಗಿಂತಲೂ ಹೆಚ್ಚಿನದಾಗಿ ಪಡೆದಿದ್ದಾರೆ. ದ್ರಾಕ್ಷಿ ರೂಟ್ ಸ್ಟಾಕ್ ಗೆ ಕಸಿ ಮಾಡಿ ನೂತನವಾಗಿ ಮಾಡಿದ ಏರುಮಡಿ ಪದ್ಧತಿಯಿಂದ ಹೆಚ್ಚಿನ ಲಾಭ ಪಡೆದಿದ್ದಾರೆ. ಕ್ಯಾರೆಟ್ ಮತ್ತು ಆಲೂಗಡ್ಡೆ ಬೆಳೆಯಲ್ಲಿ ವೈಜ್ಞಾನಿಕ ತಾಂತ್ರಿಕತೆಯಿಂದ ಹೆಚ್ಚಿನ ಇಳುವರಿ ಪಡೆದಿದ್ದಾರೆ. ಭೂ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರವಾಗಿ ಆಪ್ ಸೆಣಬು ಬೆಳೆದು ಭೂಮಿಗೆ ಸೇರಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಸಮಗ್ರ ಪೋಷಕಾಂಶಗಳ ನಿರ್ವಹಣಾ ಕ್ರಮಗಳ ಜೊತೆಗೆ ಮಾವು ಸ್ಪೆಷಲ್ ನ ಸಿಂಪಡನೆಯಿಂದ ಹೆಚ್ಚಿನ ಗುಣಮಟ್ಟದ ಉತ್ಪಾದನೆಯನ್ನು ಪಡೆದಿದ್ದಾರೆ. ಸಮಗ್ರ ಪೀಡೆ ನಿರ್ವಹಣೆಯಲ್ಲಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಅನೇಕ ರೈತರು ಮತ್ತು ಹಲವಾರು ಕೃಷಿ ವಿಜ್ಞಾನಿಗಳು ಇವರ ತೋಟಕ್ಕೆ ಭೇಟಿ ನೀಡಿದ್ದಾರೆ.
- Advertisement -
- Advertisement -
- Advertisement -