30.2 C
Sidlaghatta
Saturday, April 20, 2024

ಶಿಡ್ಲಘಟ್ಟ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ

- Advertisement -
- Advertisement -

ತಾಲ್ಲೂಕಿನ ಈ.ತಿಮ್ಮಸಂದ್ರ ವ್ಯಾಪ್ತಿಯ ನಲ್ಲಸಾನಿಕೆರೆ, ರಾಜಸಾನಿಕೆರೆ ಹಾಗೂ ರಾಮಸಮುದ್ರ ಕೆರೆಗೆ ಗುರುವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಮನೋರಮಾ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ, ಸಾದಲಿ ಹೋಬಳಿಯ ಸುಮಾರು ೫೦ ಗ್ರಾಮಗಳಿಗೆ ಮತ್ತು ಶಿಡ್ಲಘಟ್ಟಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಸ್ಥಳ ಪರಿಶೀಲನೆ ನಡೆಸಿದರು.
ಕಳೆದ ವರ್ಷ ನವೆಂಬರ್ 6 ರಂದು ಎಸ್.ವೆಂಕಟಾಪುರದ ಬಳಿ- ಕೋಡಿ ಹರಿದಿದ್ದ ನಲ್ಲಸಾನಿಕೆರೆಯಲ್ಲಿ ಬಾಗಿಣವನ್ನು ಅರ್ಪಿಸಿದ್ದ ಶಾಸಕ ಎಂ.ರಾಜಣ್ಣ, ಏಳು ಬೆಟ್ಟಗಳ ಸಾಲಿನಿಂದ ಹರಿದು ಬರುವ ನೀರು ಮೂರು ಕೆರೆಗಳನ್ನು ತುಂಬಿಸುತ್ತದೆ. ನಲ್ಲಕೊಂಡಲು ಎಂದು ಕರೆಯುವ ಬೆಟ್ಟಗಳ ಸಾಲಿನಿಂದ ಹರಿದು ಬರುವ ನೀರನ್ನು ಹಿಡಿದಿಡಲು ಹಿಂದಿನವರು ಕೆರೆಗಳನ್ನು ನಿರ್ಮಿಸಿದ್ದಾರೆ. ಈ ಭಾಗದಲ್ಲಿ ನೀರಾವರಿ ತಜ್ಞರೊಂದಿಗೆ ಸ್ಥಳಪರಿಶಿಲನೆ ನಡೆಸಿ ಇನ್ನಷ್ಟು ನೀರನ್ನು ಕ್ರೂಡೀಕರಿಸುವ ಪ್ರಯತ್ನ ನಡೆಯಬೇಕು. ಅಧಿಕಾರಿಗಳಿಗೆ ಈ ಬಗ್ಗೆ ವರದಿ ತಯಾರಿಸಲು ಸೂಚಿಸುತ್ತೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ತಿಳಿಸುತ್ತೇನೆ. ಇಲ್ಲಿ ಶೇಖರಿಸುವ ನೀರಿನಿಂದ ತಾಲ್ಲೂಕಿನ ಒಂದಷ್ಟು ಭಾಗಕ್ಕೆ ಅನುಕೂಲಕರವಾಗುತ್ತದೆ. ನೀರಿನ ತೊಂದರೆ ತಪ್ಪುತ್ತದೆ ಎಂದು ಹೇಳಿದ್ದರು.
ಅದರಂತೆ ಜಿಲ್ಲಾಧಿಕಾರಿಗಳೊಂದಿಗೆ ಎಂಜಿನಿಯರ್ಗಳ ತಂಡದೊಂದಿಗೆ ಆಗಮಿಸಿದ್ದ ಶಾಸಕ ಎಂ.ರಾಜಣ್ಣ ಮುಂದೆ ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಹಲವಾರು ಗ್ರಾಮಗಳ ನೀರಿನ ಬವಣೆಯನ್ನು ನೀಗಿಸಲು ದೂರದೃಷ್ಟಿಯುಳ್ಳ ಯೋಜನೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಈ ಕೆರೆಗಳ ಜಲಾವೃತ ಪ್ರದೇಶ ಮತ್ತು ಕೆರೆಯ ಅಂಗಳವು ಅರಣ್ಯಪ್ರದೇಶದ ವ್ಯಾಪ್ತಿಯಲ್ಲಿದ್ದು, ಕೆರೆಗಳಿಗೆ ಯಾವುದೇ ಕಲುಷಿತನೀರು ಹರಿದು ಬರುವ ಸಾದ್ಯತೆ ಇರುವುದಿಲ್ಲ. ಆದುದರಿಂದ ಕುಡಿಯುವ ನೀರನ್ನು ಶೇಖರಣೆ ಮಾಡಲು ಯೋಗ್ಯವಾಗಿರುತ್ತದೆ. ಈ ಕೆರೆಗಳ ಏರಿಯನ್ನು ಎತ್ತರಿಸಿ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಿದಲ್ಲಿ ಸಾದಲಿ ಹೋಬಳಿಯ ಸುಮಾರು ೫೦ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಿದೆ. ಅಗತ್ಯ ಅನುವುಗಳೊಂದಿಗೆ ಅಂದಾಜುಪಟ್ಟಿಯನ್ನು ತಯಾರಿಸಿ ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಕೆರೆಗಳ ಅಂಗಳದ ಒತ್ತುವರಿ ತೆರವುಗೊಳಿಸುವುದು ಮತ್ತು ಪೋಷಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರವಾಗಿ ಯೋಜನೆ ಸಿದ್ಧಪಡಿಸಲು ಸೂಚಿಸಿದರು.
ನಂತರ ತಾಲ್ಲೂಕಿನ ರಾಮಸಮುದ್ರ ಕೆರೆಗೆ ಭೇಟಿ ನೀಡಿ, ಪರಿವೀಕ್ಷಿಸಿ, ಈ ಕೆರೆಯು ಕುಡಿಯುವ ನೀರನ್ನು ಶೇಖರಣೆ ಮಾಡಲು ಯೋಗ್ಯವಾಗಿದೆ. ಈ ಕೆರೆಯಲ್ಲಿ ಶೇಖರಣೆಯಾಗುವ ನೀರನ್ನು ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಅಗತ್ಯ ಅನುವುಗಳೊಂದಿಗೆ ಅಂದಾಜುಪಟ್ಟಿಯನ್ನು ತಯಾರಿಸಲು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತಹಶೀಲ್ದಾರ್ ಮನೋರಮಾ, ಶಾಸಕ ಎಂ.ರಾಜಣ್ಣ, ನಗರ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನರಸಿಂಹಸ್ವಾಮಿ, ಸಣ್ಣ ನೀರಾವರಿ ಉಪವಿಭಾಗದ ಸಹಾಯಕ ಎಂಜಿನಿಯರ್ ಕೆ.ಎನ್.ಕೀರ್ತಿ, ಕಿರಿಯ ಎಂಜಿನಿಯರ್ ಎಚ್.ಎಸ್.ಲತಾ, ಜಿಲ್ಲಾ ಪಂಚಾಯತಿ ಸದಸ್ಯ ಬಂಕ್ ಮುನಿಯಪ್ಪ, ಶಿವಾ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸೂಳೆಕೆರೆಗಳು ಮತ್ತು ಪರಂಪರಾಗತ ಮರ: ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರದಿಂದ ಸಾದಲಿಗೆ ಹೋಗುವ ಮಾರ್ಗದಲ್ಲಿ ಸೂಳೆಕೆರೆಗಳೆಂದೇ ಪ್ರಸಿದ್ಧವಾದ ಮೂರು ಕೆರೆಗಳು ಕಾಣಸಿಗುತ್ತವೆ. ಅದರ ಸುತ್ತ ಆವರಿಸಿರುವ ಏಳು ಬೆಟ್ಟಗಳನ್ನು ನಲ್ಲಕೊಂಡಲು ಎಂದು ಕರೆಯುತ್ತಾರೆ. ಕಪ್ಪುಬಣ್ಣದ ಜಡೆಯನ್ನು ಹೆಣೆದಂತೆ ಅಥವಾ ಬೆಂಕಿಯಿಂದ ಸುಟ್ಟು ಕರಕಲಾದಂತೆ ಕಾಣುವ ಕಪ್ಪು ಬಣ್ಣದ ಕಲ್ಲುಗಳು ಈ ಬೆಟ್ಟಗಳ ಮೇಲೆ ಇರುವುದರಿಂದ ಇವಕ್ಕೆ ನಲ್ಲಕೊಂಡಲು ಎಂಬ ಹೆಸರು ಬಂದಿದೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು, ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಅವು ಕರೆಯಲ್ಪಡುತ್ತವೆ.
ಮೂವರೂ ವೇಶ್ಯೆಯರು ಅಕ್ಕತಂಗಿಯರಾಗಿದ್ದು ತಾವು ಗಳಿಸಿದ ಹಣ ಜನಸಾಮಾನ್ಯರ ಬದುಕಿಗೆ ಸದ್ವಿನಿಯೋಗ ಆಗಲೆಂದು ಕೆರೆಗಳನ್ನು ನಿರ್ಮಿಸಿದ್ದಾರೆ. ನಲ್ಲಸಾನಿಕೆರೆಗಿಂತ ಕೊಂಚ ಮೇಲ್ಭಾಗದಲ್ಲಿ ರಾಜಸಾನಿ ಕೆರೆಯಿದೆ. ಇದಕ್ಕಿಂತಲೂ ಕೊಂಚ ಮೇಲ್ಭಾಗದಲ್ಲಿ ತಿಪ್ಪಸಾನಿ ಕೆರೆಯಿದೆ. ಈ ಮೂರೂ ಕೆರೆಗಳು ಈಗಲೂ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯ ಹಲವಾರು ಹಳ್ಳಿಗಳ ಜನರಿಗೆ ವರದಾನವಾಗಿದ್ದು, ಕೃಷಿಗೆ ನೀರನ್ನು ಒದಗಿಸುತ್ತಿವೆ.
ಕರ್ನಾಟಕ ಜೀವ ವೈವಿದ್ಯ ಮಂಡಳಿಯು ‘ಪರಂಪರಾಗತ ಮರಗಳು’(ಹೆರಿಟೇಜ್ ಟ್ರೀಸ್) ಎಂದು ಜೈವಿಕ ವಿಜ್ಞಾನ ವೈವಿದ್ಯ ಕಾಯ್ದೆಯಡಿ ರಾಜ್ಯದ ಹತ್ತು ಮರಗಳನ್ನು ಘೋಷಿಸಿದ್ದು, ಈ ಹತ್ತು ಪರಂಪರಾಗತ ಮರಗಳ ಪೈಕಿ ತಿಪ್ಪಸಾನಿ ಕೆರೆ ಏರಿಯ ಮೇಲಿರುವ ೨೦೦ ವರ್ಷಕ್ಕೂ ಹಳೆಯದಾದ ಬೇವಿನ ಮರವೂ ಸೇರಿದೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!