‘ಶೌಚಾಲಯ ಇಲ್ಲ’ ಎಂದು ಮನೆಗಳ ಮೇಲೆ ಬರೆಸುವುದಲ್ಲದೆ, ಶೌಚಾಲಯವನ್ನು ಕಟ್ಟಿಸಿಕೊಳ್ಳದವರ ಮನೆಗಳಿಗೆ ಪಡಿತರ, ವಿದ್ಯುತ್ ನಿಲ್ಲಿಸಲಾಗುತ್ತದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯ್ತಿಯ ಶಿಲೇಮಾಕನಹಳ್ಳಿ ಮತ್ತು ಹಂಡಿಗನಾಳ ಗ್ರಾಮಗಳಲ್ಲಿ ಶೌಚಾಲಯ ಕಟ್ಟಿಸಿಕೊಂಡಿಲ್ಲದವರ ಮನೆಗಳ ಮೇಲೆ ‘ಶೌಚಾಲಯ ಇಲ್ಲ’ ಎಂದು ಬರೆಸಿ ಅವರು ಮಾತನಾಡಿದರು.
ಬಯಲು ಶೌಚಾಲಯ ಮುಕ್ತ ತಾಲ್ಲೂಕನ್ನಾಗಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಶೌಚಾಲಯ ಕಟ್ಟಿಸಿಕೊಂಡಿಲ್ಲದವರಿಗೆ ಸರ್ಕಾರದಿಂದ ಸಹಾಯಧನ ನೀಡುವುದಲ್ಲದೆ, ಬಯಲು ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಾಗೂ ನೋಟಿಸ್ ನೀಡುವುದು ಸಹ ಮಾಡಿದ್ದೇವೆ. ಆದರೂ ಶೌಚಾಲಯ ನಿರ್ಮಿಸಿಕೊಂಡಿಲ್ಲದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ವಿಧಿಯಿಲ್ಲವಾಗಿದೆ.
‘ನೀವು ಶೌಚಾಲಯವನ್ನು ನಿರ್ಮಿಸಿಕೊಳ್ಳಿ. ಅದರಿಂದ ಆಗುವ ಅನುಕೂಲಗಳೇನು’ ಎಂಬುದನ್ನೆಲ್ಲಾ ವಿವರಿಸಿ, ಅಂಚೆ ಮೂಲಕ ಪತ್ರವನ್ನು ಸಹ ಶೌಚಾಲಯವಿಲ್ಲದವರ ಮನೆಗಳಿಗೆ ಕಳಿಸುತ್ತೇವೆ. ತಮಟೆ ಹೊಡೆಸುವುದರ ಮೂಲಕ ಎಚ್ಚರಿಕೆಯನ್ನು ಕೂಡ ನೀಡುತ್ತೇವೆ. ಗ್ರಾಮದ ಶಾಲಾ ಶಿಕ್ಷಕರು, ಅಂಗನವಾಡಿ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ನೆರವಿನಿಂದ ಜಾಥಾ ನಡೆಸುತ್ತೇವೆ. ಆಟೋದಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತೇವೆ. ಕರಪತ್ರಗಳನ್ನು ಹಂಚುತ್ತೇವೆ.
ಶೌಚಾಲಯವನ್ನು ಕಟ್ಟಿಸಿಕೊಳ್ಳದವರ ಮನೆಗಳ ಮೇಲೆ ‘ಶೌಚಾಲಯ ಇಲ್ಲ’ ಎಂದು ಬರೆಸುತ್ತಿದ್ದೇವೆ. ಆ ಮನೆಗಳ ಬಗ್ಗೆ ಬೆಸ್ಕಾಮ್ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಜೊತೆಗೆ ಪಡಿತರವನ್ನು ಸಹ ನಿಲ್ಲಿಸುತ್ತೇವೆ. ಒಟ್ಟಾರೆ ಪ್ರತಿಯೊಂದು ಮನೆಗಳವರೂ ಶೌಚಾಲಯವನ್ನು ಹೊಂದಬೇಕು ಎಂಬುದು ನಮ್ಮ ಗುರಿ ಎಂದು ವಿವರಿಸಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರ ವಸೂಲಿಗಾರ ಶ್ರೀನಿವಾಸ್, ಅಧಿಕಾರಿ ಮೋಹನ್, ನಾರಾಯಣಸ್ವಾಮಿ, ಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -