28.1 C
Sidlaghatta
Sunday, September 8, 2024

ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆ

- Advertisement -
- Advertisement -

ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆಯನ್ನು ತಾಲ್ಲೂಕಿನ ತಲಕಾಯಲಬೆಟ್ಟದ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಿಂದ ರಾಮಲಿಂಗೇಶ್ವರ ಬೆಟ್ಟದ ದೇವಾಲಯದವರೆಗೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ೬ ಗಂಟೆಗೆ ತಲಕಾಯಲಬೆಟ್ಟದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ಆರಂಭಿಸಲಾಯಿತು. ಸಾವಿರಾರು ಭಕ್ತರು ನಾರೇಯಣ ಧ್ವಜವನ್ನು ಹಿಡಿದು ಭಜನೆಯನ್ನು ಮಾಡುತ್ತಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ತಾಲ್ಲೂಕಿನ ವಡ್ಡಹಳ್ಳಿ, ದಿಬ್ಬೂರಹಳ್ಳಿ, ಕುದುಪಕುಂಟೆ, ಯರ್ರಹಳ್ಳಿ, ನಾಚಗಾನಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಅನೆಮಡುಗು ಕ್ರಾಸ್, ಕಾಚನಾಯಕನಹಳ್ಳಿ, ಬಶೆಟ್ಟಿಹಳ್ಳಿ, ವಲಸೇನಹಳ್ಳಿ ಮಾರ್ಗವಾಗಿ ಶ್ರೀ ರಾಮಲಿಂಗೇಶ್ವರ ಬೆಟ್ಟದ ದೇವಾಲಯದಲ್ಲಿ ಪಾದಯಾತ್ರೆಯ ಸಮರ್ಪಣೆ ಮಾಡಲಾಯಿತು.
ಶ್ರೀರಾಮದಂಡು ಪಾದಯಾತ್ರೆಗೆ ಗ್ರಾಮಗಳನ್ನು ಸಿಂಗರಿಸಲಾಗಿತ್ತು. ಗ್ರಾಮಸ್ಥರು ದಾರಿಯುದ್ದಕ್ಕೂ ರಸ್ತೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಿದ್ದರು. ರಸ್ತೆಗಳನ್ನು ಸ್ವಚ್ಛಗೊಳಿಸಿದ್ದರು. ರಸ್ತೆಗಳನ್ನು ರಂಗೋಲಿಗಳಿಂದ ಅಲಂಕರಿಸಿದ್ದರು. ಪ್ರತಿಹಳ್ಳಿಯಲ್ಲಿಯೂ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಪಾದಯಾತ್ರಿಗಳಿಗೆ ನೀರು, ಹಾಲು, ಮಜ್ಜಿಗೆ, ಪಾನಕಗಳನ್ನು ವಿತರಿಸಿ ಸತ್ಕರಿಸಿದರು. ದಿಬ್ಬೂರಹಳ್ಳಿಯಲ್ಲಿ ಗ್ರಾಮಸ್ಥರು ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಈ ಸಂದರ್ಭದಲ್ಲಿ ಧರ್ಮಾಧಿಕಾರಿಗಳಾದ ಡಾ. ಎಂ.ಆರ್.ಜಯರಾಮ್ ಅವರು ಮಾತನಾಡಿ, ‘ಭಕ್ತಿಯನ್ನು ಎಲ್ಲ ವರ್ಗಗಳಿಗೂ ಹಂಚಿದ ಶ್ರೀರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ಮತ್ತು ಸಮಾಜದಲ್ಲಿ ಈಗ ನಡೆಯುತ್ತಿರುವ ಕ್ರೌರ್ಯ, ಈರ್ಷ್ಯೆ, ದ್ವೇಷ, ಅಸೂಯೆ ಮುಂತಾದ ದೃಷ್ಕೃತ್ಯಗಳಿಗೆ ಪರಿಹಾರವಾಗಿ ಶಾಂತಿ ಮತ್ತು ನೆಮ್ಮದಿಯನ್ನು ಪ್ರತಿ ಕುಟುಂಬದಲ್ಲೂ, ಗ್ರಾಮದಲ್ಲೂ ನೆಲಸುವಂತೆ ಮಾಡಲು , ಮಳೆ-ಬೆಳೆಗಳು ಸಂತುಷ್ಟವಾಗಿ – ಪ್ರಕೃತಿ ವಿಕೋಪಕ್ಕೊಳಗಾಗದಿರಲು, ಪಶು ಪಕ್ಷಿಗಳು, ಮೂಕಪ್ರಾಣಿಗಳು, ವೃಕ್ಷಗಳು ಮತ್ತು ಸಕಲ ಜೀವರಾಶಿಗಳಿಗೂ ಸುಭಿಕ್ಷೆ ಉಂಟು ಮಾಡುವ ಸಲುವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ಈ ಪಾದಯಾತ್ರೆಯ ಭಜನೆ ಸಂಕೀರ್ತನೆಯ ಉಸ್ತುವಾರಿಯನ್ನು ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆ ನಾದಸುಧಾರಸದ ಸಂಚಾಲಕರಾದ ಶ್ರೀ ಬಾಲಕೃಷ್ಣ ಭಾಗವತರ್ ಅವರು ವಹಿಸಿದ್ದು, ನಿರಂತರವಾಗಿ ಭಜನೆಯವರನ್ನು ಎಲ್ಲಿಯೂ ನಿಲ್ಲದೇ ನಡೆಸಿಕೊಂಡು, ಭಕ್ತರಿಗೆ ಉತ್ಸಾಹ ತುಂಬುತ್ತಾ ಮುನ್ನಡೆದರು.
ಸದ್ಗುರು ತಾತಯ್ಯನವರ ಭಾವಚಿತ್ರವನ್ನು ಕಲ್ಲಹಳ್ಳಿ ಲಕ್ಷ್ಮೀನಾರಾಯಣಪ್ಪ, ಶ್ರೀರಾಮನುಜಾಚಾರ್ಯರ ಚಿತ್ರವನ್ನು ಕೇಶವಚಾರ್ ಹಿಡಿದಿದ್ದರು. ಏಕನಾದವನ್ನು ನಾಯಿಂದ್ರಹಳ್ಳಿ ಕಾಲೋನಿ ನಾರಾಯಣಸ್ವಾಮಿ ನುಡಿಸಿದರು. ಪಾದಯಾತ್ರೆಯಲ್ಲಿ ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯರಮರೆಡ್ಡಿಹಳ್ಳಿ ವೆಂಕಟರಮಣಪ್ಪ, ಜಗದೀಶ್ ಕುಮಾರ್, ಕುಂಟಗಡ್ಡ ಲಕ್ಷ್ಮಣ್, ಮುಂತಾದವರು ಭಜನಾ ತಂಡಗಳನ್ನು ಮುನ್ನಡೆಸುವಲ್ಲಿ ಸಹಕರಿಸಿದರು. ಪಾದಯಾತ್ರೆಯಲ್ಲಿ ಸುಮಾರು ಮೂರು ಸಾವಿರಕ್ಕೂ ಮೀರಿ ಭಕ್ತರು ಭಾಗವಹಿಸಿದ್ದರು.
ಜಯಕುಮಾರಿಜಯರಾಮ್, ಯೋಗಿನಾರೇಯಣ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಟ್ರಸ್ಟ್ ನ ಸದಸ್ಯರಾದ ಬಾಗೇಪಲ್ಲಿ ಕೆ. ನರಸಿಂಹಪ್ಪ , ಆರ್.ಪಿ.ಎಂ.ಸತ್ಯನಾರಾಯಣ್, ಪೊಲೀಸ್ ಗುಪ್ತಚರ ಇಲಾಖೆಯ ರಮೇಶ್, ಡಾ. ಡಿ.ಟಿ. ಸತ್ಯನಾರಾಯಣರಾವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಳೇ ರಘು, ಹನುಮಂತರಾಯಪ್ಪ, ನಾಮದೇವರು ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!