ತಾಲ್ಲೂಕಿನಲ್ಲಿ ಹೂಬೆಳೆದ ರೈತರು ಅಪಾರ ನಷ್ಟದಲ್ಲಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಂತೆ, ಮಾರುಕಟ್ಟೆಗಳು ರದ್ದಾಗಿರುವ ಕಾರಣ ಹೂ ಬೆಳೆದವರು ತಲ್ಲಣಗೊಂಡಿದ್ದಾರೆ. ಹಲವರು ಬುಡಸಮೇತ ಗಿಡವನ್ನೇ ಕತ್ತರಿಸಿ ಹಾಕುತ್ತಿದ್ದರೆ, ಇನ್ನು ಕೆಲವರು ಹೂಗಳನ್ನು ಕೀಳದೆಯೇ ಹಾಗೆಯೇ ಗಿಡದಲ್ಲಿ ಬಿಟ್ಟುಬಿಟ್ಟಿದ್ದಾರೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಹಬ್ಬ ಮತ್ತು ಜಾತ್ರೆಗಳು ಹೆಚ್ಚು. ಈ ವೇಳೆ ಹೂವಿನ ಬೆಲೆಯೂ ಅಧಿಕ. ಅದಕ್ಕಾಗಿ ಈ ಸಂದರ್ಭಕ್ಕೆ ತಕ್ಕಂತೆ ಹೂ ಬಿಡುವಂತೆ ರೈತರು ಅದಕ್ಕೆ ತಕ್ಕಂತೆ ಹೂ ಬೆಳೆಯುತ್ತಾರೆ. ಆದರೆ ಈ ಬಾರಿ ಕೊರೊನಾದಿಂದ ಜಾತ್ರೆಗಳೆಲ್ಲವೂ ರದ್ದಾಗಿರುವುದರಿಂದ, ಮಾರುಕಟ್ಟೆಯಿಲ್ಲದ ಕಾರಣ ರೈತರು ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಮದುವೆ, ಗೃಹಪ್ರವೇಶ, ದೇವರ ಆಚರಣೆಗಳು ಎಲ್ಲವೂ ನಿಂತುಹೋಗಿ ಹೂಕೊಳ್ಳುವವರೇ ಇಲ್ಲವಾಗಿದ್ದಾರೆ. ಕೊರೊನಾ ಪರಿಣಾಮವಾಗಿ ಕೆಲವು ಹೂ ಬೆಳೆಗಾರರು ಹೂಗಳನ್ನು ಕೀಳಿಸದೇ ತೋಟದಲ್ಲಿಯೇ ಬಿಟ್ಟಿದ್ದು, ಯಾರು ಬೇಕಾದರೂ ಬಂದು ಕಿತ್ತುಕೊಂಡು ಹೋಗಿ ಎನ್ನುತ್ತಿದ್ದಾರೆ.
ಗುಲಾಬಿ ಗಿಡಗಳನ್ನು ಬುಡದಿಂದ ಕಿತ್ತೊಗೆದ ರೈತ:
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಆರ್.ಮುನಿಆಂಜಿನಪ್ಪ ಅವರು ಒಂದೂವರೆ ಎಕರೆ ಗುಲಾಬಿ ಬೆಳೆದಿದ್ದು, ತೋಟ ನಿರ್ವಹಣೆ ಮಾಡಲು ಆಗದೆ, ನಷ್ಟದಿಂದ ಪಾರಾಗಲು ಬುಡಸಮೇತ ಗಿಡಗಳನ್ನು ತೆಗೆದು ಹಾಕುತ್ತಿದ್ದಾರೆ.
“ಕೊರೋನಾ ಪರಿಣಾಮ ರೈತನಿಗೆ ತುಂಬಲಾರದ ನಷ್ಟವಾಗುತ್ತಿದೆ. ಸರ್ಕಾರ ರೈತನ ಕಷ್ಟಕ್ಕೆ ನೆರವಾಗಬೇಕು. ಪ್ರತಿ ದಿನ 80 ರಿಂದ 100 ಕೆಜಿ ಹೂ ಸಿಗುತ್ತಿತ್ತು. ಎರಡು ದಿನ ಮಾರುಕಟ್ಟೆಗೆ ಹೂಗಳನ್ನು ತೆಗೆದುಕೊಂಡು ಹೋಗಿ ಅಲ್ಲೇ ಸುರಿದು ಬಂದೆವು. ನಾಲ್ಕು ದಿನಕ್ಕೊಮ್ಮೆ ಮೂರು ಸಾವಿರ ರೂಗಳ ಔಷಧಿಯನ್ನು ಸಿಂಪಡಿಸಬೇಕು. ಇಲ್ಲವಾದಲ್ಲಿ ರೋಗ ಆವರಿಸುತ್ತದೆ. ಈಗ ಕಿತ್ತ ಹೂವಿನ ಕೂಲಿ ಸಿಗುವುದಿಲ್ಲ. ಹಾಗೇ ಬಿಟ್ಟರೆ ರೋಗ ಮುತ್ತಿಕೊಳ್ಳುತ್ತದೆ. ಇಷ್ಟು ದೊಡ್ಡ ಗಿಡ ಬೆಳೆಸಲು ಒಂದೂವರೆ ವರ್ಷ ಬೇಕಾಯಿತು. ಇನ್ನು ನಾವು ಹೇಗೆ ಸುಧಾರಿಸಿಕೊಳ್ಳುವುದೋ ತಿಳಿಯದಾಗಿದೆ” ಎಂದು ಮುನಿಆಂಜಿನಪ್ಪ ತಿಳಿಸಿದರು.
ಫಲವಿತ್ತ ಚೆಂಡುಹೂ ಗಿಡ, ಬೇಡಿಕೆಯಿಲ್ಲದೆ ಸೊರಗಿದ ರೈತ:
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಹರೀಶ್ ಒಂದು ಎಕರೆಯಲ್ಲಿ ಚೆಂಡು ಹೂ ಮತ್ತು ಒಂದೂ ಕಾಲು ಎಕರೆಯಲ್ಲಿ ಗುಲಾಬಿ ಹೂ ಬೆಳೆದಿದ್ದು, ಗುಲಾಬಿ ಹೂಗಳನ್ನು ಕಿತ್ತು ಅಲ್ಲಲ್ಲೇ ಬಿಸಾಡಿದ್ದರೆ, ಚೆಂಡು ಹೂಗಳನ್ನು ಕೀಳದೇ ಗಿಡದಲ್ಲಿಯೇ ಬಿಟ್ಟಿದ್ದು, ರೋಟರಿ ಹಾಕಿ ಗಿಡದ ಸಮೇತ ಉಳುವ ತೀರ್ಮಾನಕ್ಕೆ ಬಂದಿದ್ದಾರೆ.
“ಐದು ದಿನಕ್ಕೊಮ್ಮೆ 700 ರಿಂದ 800 ಕೆಜಿ ಚೆಂಡು ಹೂ ಸಿಗುತ್ತಿತ್ತು. ಯುಗಾದಿ ಶ್ರೀರಾಮನವಮಿಗೆ ಒಳ್ಳೆ ಬೆಲೆ ಸಿಗುವ ನಿರೀಕ್ಷೆಯಿತ್ತು. ಆದರೆ ಈಗ ಕೊರೊನಾ ಪರಿಣಾಮ ಹೂವನ್ನು ಕೇಳುವವರೇ ಇಲ್ಲವಾಗಿದೆ. ಯಾರು ಬೇಕಾದರೂ ಬಂದು ಹೂವನ್ನು ಉಚಿತವಾಗಿ ಕಿತ್ತುಕೊಂಡು ಹೋಗಿ ಎಂದಿದ್ದೇನೆ. ಅರಳಿದ ಗುಲಾಬಿ ಹೂಗಳು ಗಿಡದಿಂದ ಸಾರವನ್ನು ಪಡೆಯುವುದನ್ನು ತಡೆಯಲು ಕಿತ್ತು ಕೆಳಗೆ ಬಿಸಾಡಬೇಕಾಗಿ ಬಂದಿದೆ. ಚೆಂಡು ಹೂಗಿಡವನ್ನು ರೋಟರಿ ಹಾಕಿ ಉಳಲು ತೀರ್ಮಾನಿಸಿದ್ದೇನೆ” ಎಂದು ತಮ್ಮ ಪರಿಸ್ಥಿತಿಯನ್ನು ಹರೀಶ್ ವಿವರಿಸಿದರು.
- Advertisement -
- Advertisement -
- Advertisement -