ಸಾಹಿತ್ಯ ಸಮಾಜದ ಕೈಗನ್ನಡಿ. ಪದ ಸಂಪತ್ತನ್ನು ಹೆಚ್ಚಾಗಿ ಯುವ ಕವಿಗಳು ತಮ್ಮದಾಗಿಸಿಕೊಂಡು ಸ್ವರಚಿತ ಕವನ ಮತ್ತು ಚುಟುಕುಗಳ ಮುಖಾಂತರ ಸಮಾಜ ಓರೆ ಕೋರೆಗಳನ್ನು ತಿದ್ದುವಂತ ಕೆಲಸ ಮಾಡಬಹುದು ಎಂದು ನಿವೃತ್ತ ಜಂಟಿ ನಿರ್ದೇಶಕ ಸಿ.ಬಿ ಹನುಮಂತಪ್ಪ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸಂಕ್ರಾಂತಿ ಕವಿಗದ್ದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಹಲವಾರು ಕೆಲಸಗಳ ಮುಖಾಂತರ ಸಮಾಜವನ್ನು ತಿದ್ದವಂತ ಕೆಲಸ ಮಾಡುತ್ತಿರುತ್ತಾರೆ. ಎಲ್ಲದಕ್ಕಿಂತ ಅಕ್ಷರ ರೂಪದಲ್ಲಿ ಮಾಡುವ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಹಿರಿಯ ಕವಿಗಳ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳುವಂತ ಕಾಯಕದಲ್ಲಿ ನಿರಂತರವಾಗಿ ತೊಡಗಬೇಕು. ನಾಡು ನುಡಿಗಾಗಿ ಮತ್ತು ದೇಶ ಕಟ್ಟುವಂತ ರೀತಿಯಲ್ಲಿ ಯುವ ಕವಿಗಳಿಂದ ಹೊರ ಬಂದಾಗ ಸಮಾಜ ಸುಧಾರಣೆಯ ಕನಸು ನನಸಾಗಲು ಸಾಧ್ಯ ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಚಲಪತಿಗೌಡ ಮಾತನಾಡಿ, ಸಮಾಜದ ಒಳಿತಿಗಾಗಿ ಪಂಪ, ರನ್ನ, ಪುರಂದರ ದಾಸರು, ಕನಕದಾಸರು, ಬಸವಣ್ಣ, ಅಕ್ಕಮಹಾದೇವಿ ಹಲವಾರು ಮಹನೀಯರು ವಚನ ಸಾಹಿತ್ಯ ಮೂಲಕ ಜನರೊಳಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಸೇವೆ ಸಲ್ಲಿಸಿದ್ದಾರೆ. ಇಂದಿನ ಜನರು ಜಾತಿ ಧರ್ಮಗಳನ್ನು ಬದಿಗೊತ್ತಿ ಸಮಾನತೆಯತ್ತ ನಡೆದಾಗ ಮಾತ್ರ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಕವಿಗಳಾದ ಕೆ.ಎನ್.ಭವಾನಿ, ವಾಣಿಶ್ರೀ, ಅಶ್ವಿನಿ, ಶಿಲ್ಪ, ಸ್ವಾತಿ, ಭವ್ಯ, ನವೀನ್ಕುಮಾರ್, ಅನುಷಾ, ಚಂದನಾ, ಧರ್ಮೇಂದ್ರ, ರಘು, ಮುನಿರಾಜು, ಹರೀಶ್, ಗುಣಶ್ರೀ ಕವನಗಳನ್ನು ವಾಚಿಸಿದರು. ಚುಟುಕ ಸಾಹಿತ್ಯ ಪರಿಷತ್ ವತಿಯಿಂದ ಭಾಗವಹಿಸಿದ್ದ ಕವಿಗಳಿಗೆ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು.
ವಿದ್ಯಾಸಾಗರ ರಾಜ್ಯ ್ರಶಸ್ತಿ ಪುರಸ್ಕೃತೆ ಕೆ.ಎನ್.ಅಮೃತಾ, ಉಪನ್ಯಾಸಕ ಹಾಲಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮರೆಡ್ಡಿ, ಉಪನ್ಯಾಸಕ ಸುರೇಶ್, ಚುಟುಕ ಸಾಹಿತ್ಯ ಪರಿಷತ್ ತಾಲ್ಲೂಕು ಗೌರವಾಧ್ಯಕ್ಷ ಎಂ.ದೇವರಾಜ್, ಅಮರ್, ಶಿಕ್ಷಕ ಎನ್.ವಿ.ಪ್ರಸಾದ್, ಚುಸಾಪ ಅಧ್ಯಕ್ಷ ಈಧರೆ ಪ್ರಕಾಶ್, ಕಾರ್ಯದರ್ಶಿ ಈಶ್ವರ್ಸಿಂಗ್, ವೇಣುಗೋಪಾಲ್, ನರಸಿಂಹರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -