ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ರೀಡೆಯಿಂದ ಲಭಿಸುತ್ತದೆ. ಕ್ರೀಡೆಗಳು ಸ್ಪರ್ಧಾ ಮನೋಭಾವ ಬೆಳೆಸುತ್ತವೆ. ಪರಸ್ಪರ ಪ್ರೀತಿ, ಭಾತೃತ್ವತೆ, ಸ್ನೇಹ ವೃದ್ಧಿಯಾಗಲೂ ಕ್ರೀಡೆಗಳು ಸಹಕಾರಿ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ತಾಲ್ಲೂಕು ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರವರ ಇಷ್ಟದ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ತಪ್ಪದೆ ಭಾಗವಹಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆಟದಲ್ಲಿ ಕ್ರೀಡಾ ಮನೋಭಾವನೆ ಮುಖ್ಯ. ಒತ್ತಡದ ನಡುವೆ ಕೆಲಸ ಮಾಡುವುದರಿಂದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆ ಸಾಮಾನ್ಯವಾಗಿದೆ. ದೈಹಿಕ ವ್ಯಾಯಾಮ ಮತ್ತು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಖಾಯಿಲೆಗಳಿಂದ ದೂರ ಉಳಿಯಲು ಸಾಧ್ಯ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಾವೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿ, ಕ್ರೀಡೆಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಸರ್ಕಾರಿ ನೌಕರರು ದಿನದಲ್ಲಿ ಅರ್ಧ ಗಂಟೆಯಾದರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ವಿಜಯಕುಮಾರ್, ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಉಪಾಧ್ಯಕ್ಷ ಎನ್.ಶಶಿಕುಮಾರ್, ಎನ್.ರಾಮಚಂದ್ರ, ಆರ್.ಕೇಶವರೆಡ್ಡಿ, ಬಿ.ವಿ.ಶ್ರೀರಾಮಪ್ಪ, ಅಗಜಾನನಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -