ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ದೇಶೀಯ ಹಾಗೂ ವಿದೇಶೀಯ ವಲಸೆ ನೀರ ಹಕ್ಕಿಗಳು ಆಗಮಿಸುತ್ತವೆ. ಆದರೆ ಈ ಬಾರಿ ನಗರದ ಅಮ್ಮನ ಕೆರೆ ಸೇರಿದಂತೆ ಹಲವಾರು ಕೆರೆಗಳು ಒಳಗಿನಿಂತಿವೆ. ಹಾಗಾಗಿ ನೀರ ಹಕ್ಕಿಗಳೂ ಕಾಣಸಿಗುತ್ತಿಲ್ಲ. ಆದರೆ ಅಲ್ಪ ಸ್ವಲ್ವ ನೀರನ್ನು ಹೊಂದಿರುವ ಸಾದಲಿ ಹೊಸ ಕೆರೆಯಲ್ಲಿ ಹಲವು ನೀರು ಹಕ್ಕಿಗಳನ್ನು ಕಾಣಬಹುದಾಗಿದೆ.
ಕೆರೆಯಲ್ಲಿ ನೀರು ಕಡಿಮೆಯಿರುವುದರಿಂದ ಸಣ್ಣ, ದೊಡ್ಡ ಗಾತ್ರದ ನೀರು ಹಕ್ಕಿಗಳು ಒಂದೆಡೆ ಆಹಾರವನ್ನು ಬೆದಕುತ್ತಾ, ಕೆರೆಯ ನೀರಿನಲ್ಲಿ ಸಿಗುವ ಮೀನು, ಏಡಿ, ಕಪ್ಪೆ, ಶಂಖದ ಹುಳುಗಳು ಮೊದಲಾದ ಜಲಚರಗಳನ್ನು ಈ ಹಕ್ಕಿಗಳು ಬೆನ್ನು ಗೂನು ಮಾಡಿಕೊಂಡು ತಾಳ್ಮೆಯಿಂದ ಕಾದು ಹಿಡಿದು ತಿನ್ನುತ್ತಿದ್ದರೆ, ಮತ್ತೊಂದೆಡೆ ಕೆರೆಯಲ್ಲಿನ ಮೀನುಗಳನ್ನು ಹಿಡಿಯುವಲ್ಲಿ ಗ್ರಾಮೀಣರ ಉತ್ಸಾಹವೂ ಸೇರಿದೆ. ಹಕ್ಕಿಗಳ ಆಹಾರವನ್ನು ಮನುಷ್ಯರು ಕದಿಯುತ್ತಿದ್ದಾರೋ, ಮನುಷ್ಯರ ಆಹಾರವನ್ನು ಹಕ್ಕಿಗಳು ಕಬಳಿಸುತ್ತಿವೆಯೋ ಗೊಂದಲವಾಗಿ ಕಾಣುತ್ತದೆ.
ದೊಡ್ಡ ಗಾತ್ರದ ಕೆಲವು ಗ್ರೇ ಹೆರಾನ್ ಹಕ್ಕಿಗಳು, ಸ್ಟಿಲ್ಟ್, ಪ್ಲೋವರ್, ಸ್ನೈಪ್, ಸ್ಯಾಂಡ್‌ಪೈಪರ್, ಬಾತುಗಳು ಇವುಗಳೊಂದಿಗೆ ಬೆಳ್ಳಕ್ಕಿಗಳು ಮತ್ತು ಕೊಕ್ಕರೆಗಳ ಗುಂಪೂ ಸೇರಿಕೊಂಡು ಕೆರೆಯು ಪುಟ್ಟ ರಂಗನತಿಟ್ಟಿನಂತೆ ಕಂಡುಬರುತ್ತಿದೆ.
“ದೊಡ್ಡದಿರುವ ಹಳದಿಗೆಂಪು ಬಣ್ಣದ ದಾಸಕೊಕ್ಕರೆ ಅಥವಾ ಪೇಯಿಂಟೆಡ್ ಸ್ಟೋರ್ಕ್ ಹಕ್ಕಿಗಳು ಹಿಂಡು ಹಿಂಡಾಗಿ ಈಚೆಗೆ ಈ ಕೆರೆಯಲ್ಲಿ ಕಂಡು ಬಂದವು. ಆದರೆ ಒಂದು ದಿನವಷ್ಟೇ ಇಲ್ಲಿದ್ದ ಅವು ನಂತರ ಕಂಡು ಬರಲಿಲ್ಲ. ಬಹುಷಃ ಇಲ್ಲಿ ಆ ಹಕ್ಕಿಗಳಿಗೆ ಆಹಾರ ಸಾಲದಾಗಿರಬೇಕು ಅಥವಾ ಮನುಷ್ಯರ ಓಡಾಟದಿಂದ ಅವು ಬೇರೆಡೆ ಸ್ಥಳಾಂತರ ಗೊಂಡಿರಬೇಕು. ನಮ್ಮೂರ ಬಳಿಯ ಕೆರೆಯಲ್ಲಿ ಇಷ್ಟೊಂದು ಹಕ್ಕಿಗಳನ್ನು ಕಂಡು ಖುಷಿಯಾಯಿತು. ಇನ್ನೂ ನೀರಿದ್ದಿದ್ದರೆ ಎಷ್ಟೆಲ್ಲ ವಿವಿಧ ಹಕ್ಕಿಗಳನ್ನು ನೋಡಬಹುದಿತ್ತಲ್ಲವೆ ಅನ್ನಿಸಿತು’ ಎಂದು ಶಿಕ್ಷಕ ರವಿ ತಿಳಿಸಿದರು.
‘ಕೆರೆಗಳನ್ನು ಸ್ವಚ್ಛವಾಗಿರಿಸುವುದರಿಂದ ಅಂತರ್ಜಲ ಮರುಪೂರಣ, ಅನೇಕ ಜಲಚರಗಳ ಬದುಕು ಇನ್ನಿತರ ಅನುಕೂಲಗಳಿವೆ. ಪ್ರತಿವರ್ಷ ಬರುವ ವಲಸೆ ಹಕ್ಕಿಗಳಿಗೂ ತಾಣವಾಗುತ್ತದೆ. ದೂರದ ರಂಗನತಿಟ್ಟಿಗೆ ಮಕ್ಕಳನ್ನು ಕರೆದೊಯ್ಯುವುದರ ಬದಲು ಇಲ್ಲೇ ನಾನಾ ಹಕ್ಕಿಗಳ ಪರಿಚಯ ಮಾಡಿಸಬಹುದಾಗಿದೆ’ ಎಂದು ಅವರು ಹೇಳಿದರು.
- Advertisement -
- Advertisement -
- Advertisement -