ಶಿಡ್ಲಘಟ್ಟ : ಕೊರೊನಾ ಸೋಂಕು ನಿಯಂತ್ರಿಸಲು ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ. ಮಾಸ್ಕ್ ಧರಿಸಿ, ಅಂತರವನ್ನು ಕಾಯ್ದುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಿಕೊಳ್ಳಿ ಎಂದು ಕೋವಿಡ್ 19 ನ ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಮನವಿ ಮಾಡಿದರು.
ತಾಲ್ಲೂಕು ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಾಮೂಹಿಕ ಪೂಜೆ, ಪ್ರಾರ್ಥನೆ ಮೊದಲಾದ ಚಟುವಟಿಕೆಗಳಿಗೆ ಅವಕಾಶವಿಲ್ಲದ ಕಾರಣ ಮುಸ್ಲೀಮರು ಮನೆಗಳಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಿಕೊಳ್ಳಬೇಕಿದೆ. ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ತಮ್ಮ ಬಂಧು ಮಿತ್ರರನ್ನು ಹಬ್ಬಕ್ಕೆ ಆಹ್ವಾನಿಸಬೇಡಿ. ನೀವು ಸುರಕ್ಷಿತವಾಗಿರಿ ಮತ್ತು ನಿಮ್ಮ ಕುಟುಂಬದವರ ಸುರಕ್ಷತೆಗೆ ಕಾಳಜಿ ವಹಿಸಿ ಎಂದು ಕೋರಿದರು.
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ಮೇ 24 ರಂದು ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಅಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ ಎಂದರು.
ಇನ್ಸಿಟ್ಯೂಟ್ ಕ್ವಾರಂಟೈನ್ ನಲ್ಲಿ 17 ಮಂದಿ ಹಾಗೂ ಹೋಂ ಕ್ವಾರಂಟೈನ್ ನಲ್ಲಿ 117 ಮಂದಿ ಇದ್ದಾರೆ. ಹೊರ ರಾಜ್ಯಗಳಿಂದ ಬರುವ ವಲಸಿಗರನ್ನು ಕ್ವಾರಂಟೈನ್ ಮಾಡಲು ಹತ್ತು ವಿದ್ಯಾರ್ಥಿನಿಲಯಗಳನ್ನು ಸಜ್ಜುಗೊಳಿಸಲಾಗಿದೆ. ಹೊರ ಜಿಲ್ಲೆ ಅಥವಾ ಹೊರ ರಾಜ್ಯದಿಂದ ಯಾರಾದರೂ ಬಂದಲ್ಲಿ ಅಂತಹವರ ಬಗ್ಗೆ ಮಾಹಿತಿ ಕೊಡಿ ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿ, ಜನರು ಮಾಸ್ಕ್ ಧರಿಸದೇ ಓಡಾಡುವುದು, ಬೈಕ್ ನಲ್ಲಿ ಇಬ್ಬರು, ನಾಲ್ಕು ಚಕ್ರ ವಾಹನದಲ್ಲಿ ನಾಲ್ವರಿಗಿಂತಲೂ ಹೆಚ್ಚು ಮಂದಿ ಸಂಚರಿಸುವುದು ಗಮನಕ್ಕೆ ಬಂದಿದೆ. ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ ಹಾಜರಿದ್ದರು.
- Advertisement -
- Advertisement -
- Advertisement -