26.5 C
Sidlaghatta
Wednesday, July 9, 2025

ಸಿಬ್ಬಂದಿ ಹಾಗೂ ನೀರಿನ ಕೊರತೆಯಿಂದ ಕಂಗಾಲಾದ ಅಗ್ನಿಶಾಮಕ ದಳ

- Advertisement -
- Advertisement -

ಬೆಂಕಿಯನ್ನು ನಂದಿಸಬೇಕಾದ ಅಗ್ನಿಶಾಮಕ ದಳದವರಿಗೆ ನೀರಿನ ತೊಂದರೆ ಕಾಡುತ್ತಿದ್ದು, ತಾಲ್ಲೂಕಿನಲ್ಲಿ ಅಗ್ನಿ ಶಾಮಕ ದಳದ ಸೇವೆ ಸಂಪೂರ್ಣವಾಗಿ ಸಿಗದ ಪರಿಸ್ಥಿತಿ ಮೂಡಿದೆ.
ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗುತ್ತಿದ್ದು, ಸ್ಥಳೀಯವಾಗಿ ಅಗ್ನಿಶಾಮಕ ದಳ ಇರಬೇಕೆಂಬ ಒತ್ತಾಯದಿಂದ ತಾಲ್ಲೂಕಿನ ಮಿನಿ ವಿಧಾನಸೌಧ ಬಳಿಯಿರುವ ಹಳೇ ನ್ಯಾಯಾಲಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ದಳ ಕಚೇರಿಯನ್ನು ನೀಡಿ ವಾಹನ ನಿಲ್ಲಿಸಿಕೊಳ್ಳಲು ಶೆಡ್‌ ನಿರ್ಮಿಸಿಕೊಡಲಾಯಿತು. ಈ ಕಚೇರಿಯ ಉದ್ಘಾಟನೆ ನಡೆದದ್ದು 2016ರ ಜುಲೈ 1 ರಂದು. ನಾಲ್ಕು ಕೋಟಿ ಐವತ್ತಮೂರು ಲಕ್ಷ ರೂಗಳ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ, ಸಿಬ್ಬಂದಿಗೆ ವಸತಿ ಗೃಹಗಳನ್ನು ಅತಿ ಶೀಘ್ರದಲ್ಲಿ ನಿರ್ಮಿಸಿ ಸಮರ್ಪಿಸಲಾಗುವುದು ಎಂದು 2016ರ ಅಕ್ಟೋಬರ್‌ 5 ರಂದು ಗುದ್ದಲಿ ಪೂಜೆಯನ್ನು ಆನೂರು ಗ್ರಾಮದ ಬಳಿ ನಡೆಸಲಾಗಿತ್ತು.

ಅಗ್ನಿಶಾಮಕ ದಳದ ಸಿಬ್ಬಂದಿಯ ಮಾಹಿತಿ

ಆದರೆ ತಾತ್ಕಾಲಿಕ ವ್ಯವಸ್ಥೆಯಿಂದ ಅಗ್ನಿ ಶಾಮಕ ದಳದವರಿಗೆ ನೀರು ಕೊಳ್ಳಲು ಪರವಾನಗಿ ಇಲ್ಲವಾಗಿದೆ. ಒಂದು ಅಗ್ನಿಶಾಮಕ ದಳದ ವಾಹನಕ್ಕೆ 5000 ಲೀಟರ್‌ ನೀರು ಬೇಕಾಗುತ್ತದೆ. ನೀರನ್ನು ಹಂಡಿಗನಾಳದ ಹಳೆಯ ಪೆಟ್ರೋಲ್‌ ಬಂಕ್‌ನ ಮಾಲೀಕರು ಉಚಿತವಾಗಿ ನೀಡುತ್ತಿದ್ದಾರೆ. ಆದರೆ ಅಗ್ನಿ ಶಾಮಕ ದಳದವರ ಪ್ರಕಾರ ಈಗ ಬೇಸಿಗೆ ಪ್ರಾರಂಭವಾದ್ದರಿಂದ ಪ್ರತಿನಿತ್ಯ ಒಂದಾದರೂ ಕರೆ ಅವರಿಗೆ ಬರುತ್ತದೆ. ಬಹುತೇಕ ಗ್ರಾಮಗಳಲ್ಲಿ ನೀರನ್ನು ಕೊಡಲು ಹಿಂಜರಿಯುತ್ತಾರೆ. ಒಂದೆಡೆ ಹೋಗಿ ಬೆಂಕಿ ನಂದಿಸಿ ಬರುವಷ್ಟರಲ್ಲಿ ಇನ್ನೊಂದು ಕರೆ ಬಂದರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಪ್ರತಿ ಬಾರಿಯೂ ಹಂಡಿಗನಾಳಕ್ಕೆ ನೀರಿಗಾಗಿ ಹೋಗಬೇಕು. ಬೆಂಕಿ ನಂದಿಸಲು ಹೋದಾಗ ಗ್ರಾಮಸ್ಥರು ನೀರನ್ನು ಕೊಟ್ಟು ಸಹಕರಿಸಬೇಕು ಎನ್ನುತ್ತಾರೆ ಅಗ್ನಿ ಶಾಮಕ ದಳದ ಸಿಬ್ಬಂದಿ.
ಅಗ್ನಿ ಶಾಮಕ ದಳದ ಒಟ್ಟು ಹುದ್ದೆಗಳಿರುವುದು 24. ಆದರೆ ಭರ್ತಿಯಾಗಿರುವ ಹುದ್ದೆಗಳು ಕೇವಲ ನಾಲ್ಕು. ಹಗಲು ಮತ್ತು ರಾತ್ರಿ ಪಾಳಿಯನ್ನು ಇಬ್ಬಿಬ್ಬರು ಹಂಚಿಕೊಳ್ಳುತ್ತಾರೆ. ಇವರಿಗೆ ಸಹಾಯಕರಾಗಿ ಗೃಹರಕ್ಷಕದಳದ 8 ಮಂದಿಯನ್ನು ನೀಡಿದರೂ ಅವರಿಗೆ ತರಬೇತಿ ಆಗದಿರುವುದರಿಂದ ಅವರನ್ನು ಬೆಂಕಿ ನಂದಿಸುವ ಸಮಯದಲ್ಲಿ ಅವರು ಕಾರ್ಯ ನಿರ್ವಹಿಸುವಂತಿಲ್ಲ. ಕೇವಲ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಸಹಾಯಕರಾಗಿರಬೇಕಷ್ಟೆ. ಇನ್ನು ಅಗ್ನಿ ಶಾಮಕ ಠಾಣಾಧಿಕಾರಿ ಠಾಣೆಯಲ್ಲಿ ಇರಲೇ ಬೇಕು. ಹೀಗಿರುವಾಗ ಒಬ್ಬೊಬ್ಬರೇ ಅಥವಾ ಇಬ್ಬರೇ ಹೋಗಿ ಹೊತ್ತಲ್ಲದ ಹೊತ್ತಿನಲ್ಲಿ ಕಾಡುಗಳಲ್ಲಿ ಹೊತ್ತಿಕೊಳ್ಳುವ ಬೆಂಕಿಯನ್ನು ನಂದಿಸುವುದು ಬಹಳ ಕಷ್ಟ. ನಮಗೆ ಸಿಬ್ಬಂದಿ ಹಾಗೂ ಸರಿಯಾಗಿ ನೀರು ವ್ಯವಸ್ಥೆ ಮಾಡಿಕೊಟ್ಟಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೆಸರನ್ನು ಹೇಳಲಿಚ್ಚಿಸದ ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!