ರೈತರು ಬೆಳೆಗಳಿಗೆ ದಿನನಿತ್ಯದ ಬಳಕೆಗಾಗಿ ವಿವಿಧ ಕೀಟನಾಶಕಗಳನ್ನು ಬಳಸುವುದರಿಂದ ಅದನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವ ರೈತರು ಮನೆಯಲ್ಲಿರುವ ಮಕ್ಕಳಿಗೆ ಸಿಗದಂತೆ ಎಚ್ಚರವಹಿಸಬೇಕು ಹಾಗೂ ಹುಲ್ಲಿನ ಮೇವು ಇರುವ ಕಡೆ ಇಡಬಾರದು ಎಂದು ಕೀಟನಾಶಕ ತಜ್ಞೆ ಸುಮಿತ್ರಮ್ಮ ಹೇಳಿದರು.
ರೈತರ ದಿನಾಚರಣೆ ಅಂಗವಾಗಿ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಬುಧವಾರ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಅರಿವು ಮೂಡಿಸುವ ಸಲುವಾಗಿ ನಡೆದ ಸುರಕ್ಷಿತ ಕೀಟನಾಶಕ ಬಳಕೆ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವು ಕೀಟ ನಾಶಕಗಳು ಚರ್ಮದ ಮೇಲೆ ಬಿದ್ದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಕೀಟನಾಶಕ ಸಿಂಪಡಿಸುವಾಗ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಹಾಗು ಅಗತ್ಯಕ್ಕಿಂತ ಹೆಚ್ಚು ಕೀಟನಾಶಕಗಳನ್ನು ಬಳಸಬಾರದು ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮಾತನಾಡಿ, ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸುರಕ್ಷಿತ ಕೀಟ ನಾಶಕಗಳ ಬಳಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವಿಕೆಯ ಬಗ್ಗೆಯೂ ರೈತರಿಗೆ ಮಾಹಿತಿಯನ್ನು ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ದೇವೇಗೌಡ, ರೇಷ್ಮೆ ವಿಸ್ತರಣಾಧಿಕಾರಿ ಎಂ.ನಾರಾಯಣಸ್ವಾಮಿ, ರೈತ ಸಂಘದ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ಮಂಜುನಾಥ್, ಶ್ರೀನಿವಾಸಶರ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -