ಕನ್ನಡವನ್ನು ಕಟ್ಟುವ ಕೆಲಸದ ಜೊತೆಯಲ್ಲಿ ಕನ್ನಡಿಗರ ಬದುಕು ಕಟ್ಟುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಬೇಕಿದೆ. ನಾಡ ಜನರ ಬದುಕನ್ನು ಹಸನುಗೊಳಿಸುವ ಹಲವು ಜನಪರ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಬುಧವಾರ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಒಂಭತ್ತನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು ನುಡಿ ನೆಲ ಜಲದ ರಕ್ಷಣೆ ಈ ನೆಲದಲ್ಲಿ ಮಣ್ಣಿನ ಋಣಹೊತ್ತ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕನ್ನಡಿಗರು ವಿಶಾಲ ಹೃದಯವರು. ಎಲ್ಲ ಭಾಷೆ ಭಾಷಿಗರನ್ನೂ ಪ್ರೀತಿಸುತ್ತಾರೆ, ಬರ ಮಾಡಿಕೊಳ್ಳುತ್ತಾರೆ ವಿಶ್ವಾಸದಿಂದ ನೋಡುತ್ತಾರೆ. ಹಾಗಂತ ನಿರಭಿಮಾನಿಗಳಲ್ಲ, ಅಶಕ್ತರೂ ಅಲ್ಲ, ಕನ್ನಡ ನಾಡು ನುಡಿ ನೆಲ ಜಲಕ್ಕೆ ದಕ್ಕೆ ಬರುವುದಾದರೆ ಸೆಟೆದು ನಿಂತು ಯಾರನ್ನಾದರೂ ಎಂತಹ ಶಕ್ತಿಯನ್ನಾದರೂ ತಡೆದು ನಿಲ್ಲಿಸಬಲ್ಲ ನಿಜವಾದ ಶೂರರು ಎಂದು ಹೇಳಿದರು.
ನಮ್ಮ ಸಂಘಟನೆ ಸೇರಿದಂತೆ ಇತರೆ ಸಂಘಟನೆಗಳ ಕೇವಲ ನಾಡು ನುಡಿ ನೆಲ ಜಲದ ರಕ್ಷಣೆಯ ಬಗ್ಗೆ ಮಾತ್ರ ಹೋರಾಟ ಮಾಡುತ್ತಿಲ್ಲ. ಬದಲಿಗೆ ಶಾಶ್ವತ ನೀರಾವರಿ ಸಮಸ್ಯೆ, ರೈತರ ಉತ್ಪಾದನೆಗಳಿಗೆ ಬೆಲೆ ಕುಸಿತ, ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮದುವೆ ಸಮಾರಂಭಗಳ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ, ವೃದ್ಧರಿಗೆ ಆಶ್ರಯತಾಣವಾಗಿ ಪ್ರೀತಿಯಿಂದ ನೋಡಿಕೊಳ್ಳಲು “ಅಪ್ಪ ಅಪ್ಪ ಮನೆ” ಸ್ಥಾಪಿಸುತ್ತೇವೆ ಎಂದರು.
ರೈತರು ಸಾಲದ ಸುಳಿಗೆ ಸಿಲುಕದಂತೆ ಮಾಡುವ ಕೆಲಸ ಸರ್ಕಾರದ್ದು. ರೈತರಿಗೆ ನೀರಿನ ವ್ಯವಸ್ಥೆ, ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಒದಗಿಸಿದರೆ ಅವರಿಗೆ ಯಾವ ಆರ್ಥಿಕ ನೆರವಿನ ಅಗತ್ಯ ಬರುವುದಿಲ್ಲ. ಸಹಾಯಧನ, ಸಾಲ ಮನ್ನಾ ಮುಂತಾದ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ವ್ಯಯಿಸುವ ಬದಲು ರೈತರ ಮೂಲಭೂತ ಸೌಲಭ್ಯಕ್ಕೆ ಸರ್ಕಾರ ಹಣ ಖರ್ಚು ಮಾಡಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಎಸ್.ವಿ.ಅಯ್ಯರ್, ರೂಪಸಿ ರಮೇಶ್, ಡಿ.ಜಿ.ಮಲ್ಲಿಕಾರ್ಜುನ, ಎಚ್.ಜಿ.ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಕಾಚಹಳ್ಳಿ ರತ್ನಮ್ಮ, ಟಿ.ಸಾವಿತ್ರಮ್ಮ, ನಾಡೋಜ ಮುನಿವೆಂಕಟಪ್ಪ, ಖಾ.ರ.ಖಂಡೇರಾವ್, ಚನ್ನಕೃಷ್ಣಪ್ಪ, ಶಿವಕುಮಾರ್, ಜಿ.ರಮೇಶಪ್ಪ ಅವರನ್ನು ಸನ್ಮಾನಿಸಲಾಯಿತು.
ಚಲನಚಿತ್ರ ನಟ ಸಿ.ಎನ್.ಮುನಿರಾಜು, ಜಸ್ಮಿತಾ ಡಾನ್ಸ್ ಅಕಾಡೆಮಿಯ ಮಾನಸ್ ಧನುಶ್ರೀ ತಂಡ, ಲಿಟಲ್ ಸ್ಟಾರ್ ಡಾನ್ಸ್ ಗ್ರೂಪ್ ಮನೋಜ್ ತಂಡ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ನಡೆಸಿಕೊಟ್ಟರು. ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗೂ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥಗೌಡ, ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಎಂ.ಹನುಮಂತರೆಡ್ಡಿ, ರಾಜ್ಯ ಉಪಾಧ್ಯಕ್ಷ ಪುಟ್ಟೇಗೌಡ, ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ಆಲಿ, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ಗೌರವಾಧ್ಯಕ್ಷ ಸಂಜೀವಪ್ಪ, ನಗರ ಅಧ್ಯಕ್ಷ ಜೆ.ಮಧುಕುಮಾರ್, ಡಾ.ಶಶಿಧರ್, ಡಾ.ಮಧುಕರ್, ಶಿವಕುಮಾರ್, ಸುರೇಶ್, ರಮೇಶ್, ಚಂದ್ರು, ಗಂಗಾಧರ್, ನರೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಮಂಜುನಾಥ್ ಹಾಜರಿದ್ದರು.
- Advertisement -
- Advertisement -
- Advertisement -