ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಮುಖದ ನಾಣ್ಯ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಮೇಲೂರು ಶಾಖೆಯ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ ಶನಿವಾರ ಮೇಲೂರಿನಿಂದ ಶಿಡ್ಲಘಟ್ಟದವರೆಗೂ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ವೀರಗಾಸೆ ಮತ್ತು ಡೋಲಿನ ವಾದನಗಳ ಸಮೇತವಾಗಿ ಪಾದಯಾತ್ರೆಯನ್ನು ಮೇಲೂರಿನಿಂದ ನಡೆಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲೂ ಸಂಚರಿಸಿ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಜನಶಕ್ತಿ ವೇದಿಕೆ ಸದಸ್ಯರು ಸೇರಿದರು.
ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು. ಅಂಥ ಮೇರು ವ್ಯಕ್ತಿತ್ವವನ್ನು ನಾಣ್ಯದ ಒಂದು ಮುಖವಾಗಿ ಚಿತ್ರಿಸಿ ಅವರನ್ನು ಗೌರವಿಸಬೇಕು. ಮೊಟ್ಟಮೊದಲ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಅವರನ್ನು ಗೌರವಿಸಬೇಕು ಎಂದು ಒತ್ತಾಯಿಸಿ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಾಡಿಗೆ ಕೊಡುಗೆಯನ್ನು ನೀಡಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಈ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷ ಎಂ.ಆರ್.ಪ್ರಭಾಕರ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಸಂಚಾಲಕ ಎಂ.ಸಿ.ಚೇತನ್, ಜಂಟಿ ಕಾರ್ಯದರ್ಶಿ ಆರ್.ಬಿ.ಪ್ರತಾಪ್, ಅನಿಲ್ಕುಮಾರ್, ರಾಘವೇಂದ್ರ, ಗಿರೀಶ್ನಾಯಕ್, ಧರ್ಮೇಂದ್ರ, ಕಿರಣ್, ಮಂಜುನಾಥ್, ಭಾರ್ಗವ್, ಆಟೋ ಮಂಜುನಾಥ್, ಚಂದ್ರು ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -