ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಸಿಗಳನ್ನು ನೆಟ್ಟು ಗಿಡ ಮರಗಳನ್ನು ಬೆಳೆಸಬೇಕೆಂದು ಒಂದಡೆ ಘೋಷಣೆ ಮಾಡಿದರೆ, ಮತ್ತೊಂದಡೆ ಅಭಿವೃದ್ಧಿಯ ಹೆಸರಿನಲ್ಲಿ ಸುಮಾರು 4೦ ವರ್ಷಗಳ ಹಳೆಯ ಮರಗಳ ಮಾರಣಹೋಮ ಮಾಡಿರುವ ಸಂಗತಿ ನಗರದಲ್ಲಿ ನಡೆದಿದೆ.
ತಾಲೂಕಿನಾದ್ಯಂತ ಸಂಭವಿಸುವ ಬೆಂಕಿ ಅನುಹಾತಗಳನ್ನು ತಡೆಗಟ್ಟುವ ಸಲುವಾಗಿ ಹೊರವಲಯದ ಆನೂರು ಗೇಟ್ ಬಳಿ ಅಗ್ನಿಶಾಮಕ ದಳ ಘಟಕದ ಕಟ್ಟಡ ನಿರ್ಮಿಸಲು ಸರ್ಕಾರ ಸುಮಾರು ೬೫ ಲಕ್ಷ ರೂಗಳನ್ನು ಮಂಜೂರಾಗಿದ್ದು ನೂತನ ಕಟ್ಟಡವನ್ನು ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಕಚೇರಿಯನ್ನು ನಡೆಸಲು ಹಳೇ ನ್ಯಾಯಾಲಯ ಕಟ್ಟಡದಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಹಳೇ ನ್ಯಾಯಾಲಯ ಮುಂದೆ ಖಾಲಿ ಇರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವ ಸಲುವಾಗಿ ಸುಮಾರು ೩೦ ರಿಂದ -೪೦ ವರ್ಷಗಳ ಹಿಂದಿನ ಬೃಹತ್ಗಾತ್ರದ ಮರಗಳನ್ನು ಕಡಿದು ಹಾಕಿದ್ದರಿಂದಾಗಿ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಅವರು, ಅಗ್ನಿಶಾಮಕದಳದ ಘಟಕ ಕಾರ್ಯಾರಂಭಿಸಲು ಹಳೇ ನ್ಯಾಯಾಲಯದ ಮುಂದೆ ಇರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಕೆಲವು ಮರಗಳನ್ನು ಕಡಿಯಲು ನಗರಸಭೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಹಳೆಯ ಮರಗಳ ಮಾರಣಹೋಮ ನಡೆಸಲು ಅರಣ್ಯ ಇಲಾಖೆಯ ಅಧಿಕಾರಿಗಳು ನೆರವು ನೀಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವುದು ಕೇವಲ ಘೋಷಣೆಗಷ್ಟೇ ಸೀಮಿತವೆಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬೀದಿಪಾಲಾದ ಚಹಾ ಅಂಗಡಿಗಳು: ಹಳೇ ನ್ಯಾಯಾಲಯ ಕಟ್ಟಡದ ಮುಂದೆ ಖಾಲಿವಿದ್ದ ಜಾಗದಲ್ಲಿ ಬಹುತೇಕ ಬಡವರು ಚಹಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಮರಗಳನ್ನು ಕಡಿದು ಹಾಕುವ ನೆಪದಲ್ಲಿ ಟೀ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು ಬಹುತೇಕ ಬಡಕುಟುಂಬದ ಸದಸ್ಯರು ಬೀದಿಪಾಲಾಗಿದ್ದಾರೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಡವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಳ್ಳುವ ಅಂಗಡಿಯಿಟ್ಟುಕೊಂಡಿದ್ದವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
- Advertisement -
- Advertisement -
- Advertisement -
- Advertisement -