ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಎರಡು ಹಾಳು ಬಾವಿಗಳಲ್ಲಿ ರಾತ್ರಿ ಬಿದ್ದಿದ್ದ ಆರು ನಾಯಿಗಳನ್ನು ಭಾನುವಾರ ಬೆಳಿಗ್ಗೆ ಸ್ನೇಕ್ ನಾಗರಾಜ್ ರಕ್ಷಿಸಿದ್ದಾರೆ.
ಕೊತ್ತನೂರು ಗ್ರಾಮದ ಆಂಜಿನಪ್ಪ ಅವರ ಜಮೀನಿನಲ್ಲಿದ್ದ ಹಾಳು ಬಾವಿಯಲ್ಲಿ ಒಂದು ನಾಯಿ ಬಿದ್ದಿದ್ದರೆ, ಚಂದ್ರಾಯಪ್ಪ ಅವರಿಗೆ ಸೇರಿದ ಜಮೀನಿನಲ್ಲಿದ್ದ ಹಾಳು ಬಾವಿಯಲ್ಲಿ ಐದು ನಾಯಿಗಳು ಬಿದ್ದಿವೆ. ನಾಯಿಗಳಿಗೆ ಏನೂ ಗಾಯಗಳಾಗಿರಲಿಲ್ಲ. ನಾಯಿಗಳ ಕೂಗನ್ನು ಕೇಳಿಸಿಕೊಂಡ ಗ್ರಾಮಸ್ಥರು ಸ್ನೇಕ್ ನಾಗರಾಜ್ ಅವರನ್ನು ಕರೆದುಕೊಂಡು ಬಂದಿದ್ದಾರೆ.
ಗ್ರಾಮಸ್ಥರ ಸಹಾಯದಿಂದ ಹಗ್ಗವನ್ನು ಬಾವಿಯೊಳಗೆ ಬಿಟ್ಟು ಇಳಿದ ಸ್ನೇಕ್ ನಾಗರಾಜ್, ಒಂದೊಂದೇ ನಾಯಿಗೆ ಹಗ್ಗ ಕಟ್ಟಿದ ಮೇಲೆ, ಮೇಲೆ ನಿಂತಿದ್ದವರು ಅವನ್ನು ಎಳೆದುಕೊಂಡಿದ್ದಾರೆ.
‘ರಾತ್ರಿ ವೇಳೆ ತಿಳಿಯದೆ ಅವು ಹೋಗಿ ಬಿದ್ದಿರಬೇಕು. ಬಾವಿಯೊಳಗೆ ಇಳಿದು ಅಭ್ಯಾಸವಿದೆ. ಆದರೆ, ಗಾಬರಿಯಾಗಿ ನಾಯಿಗಳು ಕಚ್ಚಬಹುದು ಎಂದು ಆನಂದ್ ಎಂಬುವರನ್ನು ಜೊತೆಗೆ ಕರೆದುಕೊಂಡು ಬಾವಿಯಲ್ಲಿ ಇಳಿದಿದ್ದೆ. ಒಂದೊಂದಾಗಿ ನಾಯಿಗಳಿಗೆ ಹಗ್ಗ ಕಟ್ಟಿ ಎಳೆಸಿ ರಕ್ಷಿಸಿದೆವು. ಅದರಲ್ಲಿ ಒಂದು ಮರಿಯಿತ್ತು. ಅದನ್ನು ಹಿಡಿದುಕೊಂಡು ಹಗ್ಗದ ಸಹಾಯದಿಂದ ಮೇಲೆ ಬಂದೆ. ಯಾವ ನಾಯಿಗೂ ಏನೂ ಆಗಿರಲಿಲ್ಲ’ ಎಂದು ಸ್ನೇಕ್ ನಾಗರಾಜ್ ವಿವರಿಸಿದರು.