ಔಷಧಿ ವ್ಯಾಪಾರವು ಸಮಾಜದಲ್ಲಿ ಉನ್ನತವಾದ ಸೇವಾ ಉದ್ಯಮವಾಗಿದೆ. ಔಷಧಿ ಮಾರಾಟದ ಕುರಿತಂತೆ ಹಲವಾರು ಹೊಸ ನಿಯಮ ನಿಬಂಧನೆಗಳು ಜಾರಿಯಾಗುತ್ತಿದ್ದು ಅವುಗಳ ಬಗ್ಗೆ ನಿರಂತರ ಕಲಿಕೆಯ ಅಗತ್ಯತೆಯಿದೆ. ಇದರಿಂದ ಔಷಧಿ ವ್ಯಾಪಾರಿಗಳಿಗೆ ಮತ್ತು ಅವರಿಂದ ಔಷಧಿ ಪಡೆಯುವ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸಹಾಯಕ ಔಷಧ ನಿಯಂತ್ರಕ ಗಣೇಶ್ ಬಾಬು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಮತ್ತು ಶಿಡ್ಲಘಟ್ಟ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಹದಲ್ಲಿ ಪ್ರತಿಜೀವಕಗಳನ್ನು ಸೃಜಿಸುವ ಆಂಟಿಬಯಾಟಿಕ್ ಔಷಧಿಗಳನ್ನು ಮಾರುವಾಗ ನಿಯಮವನ್ನು ಪಾಲಿಸಿ. ಜೀವ ಉಳಿಸುವ ಔಷಧಗಳಿಗೆ ದೇಹ ಸ್ಪಂದಿಸದೆ ಆಗುವ ಕಾಲ ಬರದಂತೆ ಗಮನವಿಟ್ಟು ಔಷಧಿಗಳನ್ನು ನೀಡಿ. ರೋಗಿಗಳಿಗೆ ತಿಳುವಳಿಕೆ ನೀಡಿ. ಮತ್ತು ಬರುವ ಔಷಧಿಗಳನ್ನು ಮಾರಬೇಡಿ. ಗರ್ಭಪಾತದ ಔಷಧಿಗಳನ್ನು ಔಷಧಿ ಮಳಿಗೆಗಳಲ್ಲಿ ಮಾರುವುದು ಅಪರಾಧ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಮತ್ತು ಚಿಂತಾಮಣಿಯಲ್ಲಿ ಈ ಮಾತ್ರೆಯ ಮಾರಾಟದ ಪರಿಣಾಮ ಒಂದೊಂದು ಜೀವ ಹೋಗಿದ್ದು, ಪೊಲೀಸ್ ತನಿಖೆ ಜಾರಿಯಲ್ಲಿದೆ. ಔಷಧಿ ವ್ಯಾಪಾರಸ್ಥರು ಇರುವುದು ಜೀವ ಉಳಿಸಲು, ಸಣ್ಣ ಲಾಬಕ್ಕಾಗಿ ಜೀವ ಕಳೆಯುವಕ್ಕೆ ಕಾರಣರಾಗಬಾರದು ಎಂದು ಹೇಳಿದರು.
ನೂರು ಮೀಟರ್ ಅಂತರದಲ್ಲಿ ಎರಡು ಔಷಧಿ ಅಂಗಡಿಗಳಿರಬಾರದು. ಜನಸಂಖ್ಯೆ ಆಧಾರಿತವಾಗಿ ಔಷಧಿ ಅಂಗಡಿಗಳಿಗೆ ಪರವಾನಗಿ ನೀಡಬೇಕು ಮುಂತಾದ ಸಲಹೆಗಳನ್ನು ಮಷಾಲ್ಕರ್ ಕಮಿಟಿಯು ಸರ್ಕಾರಕ್ಕೆ ನೀಡಿದೆ. ಮಷಾಲ್ಕರ್ ಕಮಿಟಿಯ ಸಲಹೆಗಳನ್ನು ಜಾರಿಗೆ ತರುವಂತೆ ಔಷಧಿ ವ್ಯಾಪಾರಿಗಳ ಸಂಘದಿಂದ ಸರ್ಕಾರಕ್ಕೆ ಒತ್ತಾಯಿಸಿದಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಎಂದು ನುಡಿದರು.
ಔಷಧ ನಿಯಂತ್ರಕ ಸುರೇಶ್ ಮಾತನಾಡಿ, ಹಿಂದೆ ನಾವು ಸಣ್ಣವರಿದ್ದಾಗ ಕೆರೆ ಕುಂಟೆ ನೀರನ್ನು ಕುಡಿದರೂ ಏನೂ ಆಗುತ್ತಿರಲಿಲ್ಲ. ಆದರೆ ಈಗ ಶುದ್ಧೀಕರಿಸಿದ ನೀರು ಕುಡಿದರೂ ಖಾಯಿಲೆಗಳು ಬರುತ್ತವೆ. ಇದಕ್ಕೆ ಕಾರಣ ನಾವು ಸೇವಿಸುವ ಪ್ರತಿಜೀವಕ ಔಷಧಿಗಳು. ಅವುಗಳ ಮಾರಾಟದ ಬಗ್ಗೆ ಎಚ್ಚರಿಕೆಯಿರಲಿ. ಔಷಧಿಗಳ ಗಡುವು ದಿನಾಂಕವನ್ನು ನೋಡಿಕೊಡು ಮಾರಾಟ ಮಾಡಿ ಎಂದು ಹೇಳಿದರು.
ಹಲವು ವೈದ್ಯರು ಆಂಟಿಬಯಾಟಿಕ್ ಔಷಧಿಗಳನ್ನು ನಿಯಮಿತ ಅವಧಿಗೆ ತಕ್ಕಂತೆ ಬರೆಯುವುದಿಲ್ಲ. ವೈದ್ಯರೇ ಔಷಧಿಗಳನ್ನು ಮಾರಾಟ ಮಾಡುತ್ತಾರೆ. ವೈದ್ಯರು ಬರೆದುಕೊಡುವ ಚೀಟಿಗಳಲ್ಲಿ ಕೆಎಂಸಿ ಸಂಖ್ಯೆಯೇ ಇರುವುದಿಲ್ಲ. ವೈದ್ಯರಿಗೂ ತಿಳುವಳಿಕೆಯ ಕಾರ್ಯಕ್ರಮದ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಈ ಸಂದರ್ಭದಲ್ಲಿ ಔಷಧಿ ವ್ಯಾಪಾರಿಗಳು ಕೋರಿದರು. ಅದಕ್ಕೆ ಉತ್ತರಿಸಿದ ಸಹಾಯಕ ಔಷಧ ನಿಯಂತ್ರಕ ಗಣೇಶ್ ಬಾಬು, ಈ ಬಾರಿ ಐಎಂಎ ಸಭೆಯಲ್ಲಿ ಈ ಸಂಗತಿಗಳನ್ನು ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ.ವೆಂಕಟರತ್ನಂಗುಪ್ತ, ಪ್ರಧಾನ ಕಾರ್ಯದರ್ಶಿ ಕೆ.ಎನ್.ರಮೇಶ್‌ಬಾಬು, ಉಪಾಧ್ಯಕ್ಷ ಸತೀಶ್‌ಕುಮಾರ್, ಖಜಾಂಚಿ ಪಿ.ಎಸ್.ಮಂಜುನಾಥ್, ಸಹ ಕಾರ್ಯದರ್ಶಿ ಎಲ್.ಸುರೇಶ್, ಅಂಜನಿ ಮನಮೋಹನ್, ಎಸ್‌ಎಲ್‌ಎನ್ ಚಂದ್ರಶೇಖರ್, ಸಿ.ಆರ್.ಜಗದೀಶ್, ಲಕ್ಷ್ಮೀನಾರಾಯಣಬಾಬು, ಶಂಕರ್‌ನಾರಾಯಣ್, ಬಾಬು, ಮೋಹನ್, ಆನಂದ್, ಮಂಜುನಾಥ್, ಅಲೀಂ. ಬಾಬಾಜಾನ್, ಚಂದ್ರಶೇಖರ್, ಶಂಕರ್ ಹಾಜರಿದ್ದರು.
- Advertisement -
- Advertisement -
- Advertisement -