‘ನಮ್ಮ ಜಮೀನು ಮತ್ತು ಮನೆಯಿರುವ ಸ್ಥಳದಲ್ಲಿ ಬೀಳುವ ಒಂದು ಹನಿ ನೀರನ್ನೂ ಹೊರಗೆ ವ್ಯರ್ಥವಾಗಿ ಹೋಗಲು ಬಿಡುವುದಿಲ್ಲ. ನನಗೆ ಕೊಳವೆ ಬಾವಿಯ ಅವಶ್ಯಕತೆಯೇ ಇಲ್ಲ’ ಎಂದು ಧೈರ್ಯವಾಗಿ ಹೇಳುತ್ತಾರೆ ಕುಂದಲಗುರ್ಕಿಯ ಅರುಣ್‌ಕುಮಾರ್.
ಕೊಳವೆ ಬಾವಿಯ ಸಹವಾಸವೇ ಬೇಡ ಎನ್ನುವ ಸಾಹಸಿಗಳು ನಮ್ಮ ಜಿಲ್ಲೆಯಲ್ಲಿ ಸಿಗುವವರು ವಿರಳ, ಅದರಲ್ಲೂ ಹಿಪ್ಪುನೇರಳೆ ಬೇಸಾಯ, ರೇಷ್ಮೆ ಗೂಡಿನ ಉತ್ಪಾದನೆ, ಕೋಳಿ ಸಾಕಾಣಿಕೆ, ಎಮ್ಮೆ, ಕುರಿ ಸಾಕಾಣಿಕೆ, ಮಾವಿನ ಬೆಳೆಯನ್ನು ಹೊಂದಿರುವ ಈ ರೈತ ಕೊಳವೆ ಬಾವಿಯನ್ನೇ ಧಿಕ್ಕರಿಸಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿ.
ವಿಶೇಷವೆಂದರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪಿ1 ಬಿತ್ತನೆಗೂಡನ್ನು ಬೆಳೆಯಲು ಕೇಂದ್ರ ರೇಷ್ಮೆ ಮಂಡಳಿಯಿಂದ ಪರವಾನಗಿ ಪಡೆದಿರುವ ಏಕೈಕ ವ್ಯಕ್ತಿ ಇವರು. ಸಾಮಾನ್ಯವಾಗಿ ಎಲ್ಲರೂ ಬೆಳೆಯುವ ಮಿಶ್ರತಳಿ ಮತ್ತು ದ್ವಿತಳಿ ರೇಷ್ಮೆ ಗೂಡಿಗಿಂತ ಅತಿ ಸೂಕ್ಷ್ಮತೆಯಿಂದ ಪಿ1 ಬಿತ್ತನೆಗೂಡನ್ನು ಬೆಳೆಯಬೇಕು. ಹಾಗಾಗಿ ಕೇಂದ್ರ ರೇಷ್ಮೆ ಮಂಡಳಿಯು ಇವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಇವರಿಗೆ ಮೊಟ್ಟೆಯನ್ನು ನೀಡಿ ಬಿತ್ತನೆ ಗೂಡನ್ನು ಬೆಳೆದ ನಂತರ ಖರೀದಿಸುತ್ತದೆ.
ಮನೆ, ದನದ ಶೆಡ್, ಹುಳು ಮನೆಯಿಂದ ಹರಿದು ಬರುವ ನೀರೆಲ್ಲ ಶುದ್ಧೀಕರಣಗೊಂಡು 78 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಸೇರುತ್ತದೆ. ಮನೆಯಲ್ಲಿ ಬಚ್ಚಲು, ಅಡುಗೆ ಮನೆ, ಕೈತೊಳೆಯುವ ನೀರು ಒಂದು ಹನಿಯೂ ವ್ಯರ್ಥವಾಗದಂತೆ ಟ್ಯಾಂಕ್ ಸೇರುವಂತೆ ವ್ಯವಸ್ಥೆ ರೂಪಿಸಿದ್ದಾರೆ. ಮಳೆನೀರು ಮಾಡಿನ ಮೇಲೆ ಬೀಳಲಿ, ನೆಲದ ಮೇಲೆ ಬೀಳಲಿ ಕಡೆಗೆ ಸೇರುವುದು ಟ್ಯಾಂಕ್.
ಗುಣಿ ಕಡ್ಡಿ ಪದ್ಧತಿ ಅಥವಾ ಮರಗಡ್ಡಿ ಪದ್ಧತಿಯಲ್ಲಿ ಹಿಪ್ಪುನೇರಳೆ ಬೆಳೆಯುವುದರಿಂದ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಅತ್ಯಲ್ಪ ನೀರಿನಿಂದ ಬೆಳೆಯಬಹುದಾಗಿದೆ. ಈ ಪದ್ಧತಿಯನ್ನು ಅಳವಡಿಸಿಕೊಂಡು 10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ಈ ಪದ್ಧತಿಯಲ್ಲಿ ನಾಟಿ ಮಾಡಿರುವ ಅರುಣ್‌ಕುಮಾರ್ ಒಂದೊಂದು ಎಲೆಯೂ ಒಂದು ಅಡಿ ಉದ್ದ ಅರ್ಧ ಅಡಿಯಷ್ಟು ಅಗಲವಿರುವುದನ್ನು ತೋರಿಸುತ್ತಾರೆ.
ಮರಗಡ್ಡಿ ಪದ್ಧತಿಯಲ್ಲಿ ಮೂರರಿಂದ ನಾಲ್ಕು ಅಡಿ ಆಳವಾಗಿ ಗುಣಿ ತೆಗೆದು ಹಿಪ್ಪುನೇರಳೆ ನಾರನ್ನು ನಾಟಿ ಮಾಡಿ ಅದು ಬೆಳೆದಂತೆಲ್ಲಾ ಕೊಟ್ಟಿಗೆ ಗೊಬ್ಬರ, ಮಣ್ಣು, ಹಸಿರೆಲೆ ಸೊಪ್ಪು ಮೊದಲಾದವುಗಳನ್ನು ತುಂಬಿಸುತ್ತಾ ಕವಲುಗಳನ್ನು ಕತ್ತರಿಸುತ್ತಾ ಮರದಂತೆ ಎತ್ತರಗೊಳಿಸಬೇಕು. ಮೊದಲ ವರ್ಷ ಬೆಳೆ ಸಿಗುವುದಿಲ್ಲ, ನಂತರ ಸೊಪ್ಪು ಸಿಗಲು ಪ್ರಾರಂಭವಾಗುತ್ತದೆ. ತಾಳ್ಮೆಯಿದ್ದವರಿಗೆ ಅಧಿಕ ಫಲ ಎಂಬಂತಹುದು ಈ ವಿಧಾನ ಎನ್ನುತ್ತಾರೆ ಅರುಣ್‌ಕುಮಾರ್.
ಅಂತರ ಬೆಳೆಯಾಗಿ ಮೊದಲು ರಾಗಿಯನ್ನು ಹಾಕಿದ್ದೆ, ಮನೆಗೆ ಆಗಿ ಉಳಿಯುವಷ್ಟು ರಾಗಿ ಬೆಳೆಯುವೆ. ಮಳೆ ಹಾಗೂ ಮನೆಯಿಂದ ಹರಿದು ತುಂಬುವ ಟ್ಯಾಂಕ್‌ನಿಂದ ಹನಿ ನೀರಾವರಿಯ ಮೂಲಕ ನೀರನ್ನು ಹರಿಸುತ್ತೇನೆ. ದಿನಕ್ಕೆ ಗಿಡವೊಂದಕ್ಕೆ ಮುಕ್ಕಾಲು ಲೀಟರ್ ನೀರು ಉಣಿಸಿದರೆ ಸಾಕು. ಇಲ್ಲವಾದಲ್ಲಿ ಮೂರು ದಿನಗಳಿಗೊಮ್ಮೆ ಎರಡೂವರೆ ಲೀಟರ್ ನೀರು ಬುಡಕ್ಕೆ ಸೇರಿಸಿದರೆ ಸಾಕು.
ಇದರೊಂದಿಗೆ 2,500 ಕೋಳಿಗಳಿರುವ ಕೋಳಿಯ ಶೆಡ್ ಸಹ ಇವರು ಹೊಂದಿದ್ದಾರೆ. ಕೋಳಿ ದೊಡ್ಡದಾಗುತ್ತಿದ್ದಂತೆಯೇ ಅವುಗಳಿಗೂ ಮಳೆ ನೀರನ್ನೇ ಕೊಡುತ್ತಾರೆ. ಈ ನೀರು ಸೇವಿಸಿದಷ್ಟು ಅವುಗಳ ಆರೋಗ್ಯ ಬಹಳ ಚೆನ್ನಾಗಿರುತ್ತದೆ ಎಂಬುದು ಇವರ ಅನುಭವ.
ಗ್ರಾಮದ ಇನ್ನೊಂದು ಭಾಗದಲ್ಲಿರುವ ಇವರ ನಾಲ್ಕು ಎಕರೆ ಮಾವಿನ ತೋಪಿನ ಬಳಿ ದೊಡ್ಡ ಕೃಷಿಹೊಂಡವನ್ನು ನಿರ್ಮಿಸಿದ್ದಾರೆ. ಮಳೆ ನೀರು ಹರಿದು ಬರುವ ಕಾಲುವೆಯನ್ನು ಅದಕ್ಕೆ ತಿರುವಿದ್ದಾರೆ. 10 ಲಕ್ಷ ಲೀಟರ್ ನೀರು ಹಿಡಿದಿಡುವ ಈ ಕೃಷಿ ಹೊಂಡದಲ್ಲಿ ಕಳೆದ ತಿಂಗಳು ಬಂದ ಸಣ್ಣ ಮಳೆಗೇ ಸಾಕಷ್ಟು ನೀರು ಹೊಂಡದಲ್ಲಿ ತುಂಬಿದೆ. ಮಾವಿನ ಫಸಲಿಗೆ ಬೇಸಿಗೆ ಪೂರಾ ಇನ್ನು ನೀರಿನ ಸಮಸ್ಯೆಯಿಲ್ಲ.
‘ಎಂಟು ವರ್ಷಗಳ ಹಿಂದೆ ಕೊಳವೆ ಬಾವಿಯಿದ್ದದ್ದು ನೀರು ಕಡಿಮೆಯಾಗುತ್ತಾ ಕಡೆಗೆ ನಿಂತು ಹೋಯಿತು. ರೇಷ್ಮೆ ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸುತ್ತಾ ಪಿ1 ಬಿತ್ತನೆಗೂಡನ್ನು ಬೆಳೆಯಲು ಕೇಂದ್ರ ರೇಷ್ಮೆ ಮಂಡಳಿಯಿಂದ ಪರವಾನಗಿ ಪಡೆದೆ. ಕೊಳವೆ ಬಾವಿಗಾಗಿ ಸಾಲ ಸೋಲ ಮಾಡಿ ಹಣ ಕಳೆಯುವುದರ ಬದಲಿಗೆ ಇರುವ ನೀರು ಮತ್ತು ಮಳೆ ನೀರನ್ನು ಹನಿಹನಿಯೂ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಅದರಲ್ಲಿ ಸಫಲತೆಯೂ ಕಂಡೆ. ಈಗ ಕೊಳವೆ ಬಾವಿಯ ಸಹವಾಸವೇ ಬೇಡ ಎಂದು ಧೈರ್ಯವಾಗಿ ಹೇಳಬಲ್ಲೆ’ ಎಂದು ಅರುಣ್‌ಕುಮಾರ್ ತಿಳಿಸಿದರು.
- Advertisement -
- Advertisement -
- Advertisement -