ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಬುಧವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಪೋಷಕರಿಗಾಗಿ ವಿಶಿಷ್ಠ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಸರಸ್ವತಿ ಪೂಜೆಯನ್ನು ಏರ್ಪಡಿಸಿದ್ದು, ಆ ಪ್ರಯುಕ್ತ ಗ್ರಾಮದ ಹಿರಿಯರಿಗೆ ಮನರಂಜನಾ ಆಟಗಳನ್ನು ನಡೆಸುತ್ತಿರುವುದಾಗಿ ಶಿಕ್ಷಕರು ತಿಳಿಸಿದರು.
ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್ ಒಡೆಯುವ ಸ್ಪರ್ಧೆ ಮತ್ತು ನೀರಿರುವ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ನಡೆಸಲಾಯಿತು. ಪುರುಷರಿಗೆ ಹಗ್ಗ ಜಗ್ಗಾಟ, ಗೋಣಿ ಚೀಲ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್ ಒಡೆಯುವ ಸ್ಪರ್ಧೆಯನ್ನು ನಡೆಸಲಾಯಿತು.
ಗ್ರಾಮಸ್ಥರೆಲ್ಲ ಹಿರಿಯರು ಕಿರಿಯರು ಬೇಧವಿಲ್ಲದೆ ಸ್ಪರ್ಧೆಯನ್ನು ನೋಡಲು ಆಗಮಿಸಿದ್ದು, ಸ್ಪರ್ಧಾಳುಗಳಿಗೆ ಹುರಿದುಂಬಿಸುತ್ತಿದ್ದರು. ಬಿಸಿಲಿನ ಝಳವನ್ನು ಲೆಕ್ಕಿಸದೆ ಜನರು ಸ್ಪರ್ಧೆಯನ್ನು ನೋಡಲು ನಿಂತಿದ್ದರು.
ಮಹಿಳೆಯರಿಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ನಾಗಮಣಿ(ಪ್ರಥಮ), ಕಲ್ಪನಾ(ದ್ವಿತೀಯ) ಮತ್ತು ಶೋಭಾ ಶ್ರೀನಿವಾಸ್(ತೃತೀಯ), ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್ ಒಡೆಯುವ ಸ್ಪರ್ಧೆಯಲ್ಲಿ ಅನೀತಾ(ಪ್ರಥಮ), ಕಲಾವತಿ(ದ್ವಿತೀಯ), ಶಿಲ್ಪ(ತೃತೀಯ) ಹಾಗೂ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಲ್ಲಿ ನಾಗರತ್ನಮ್ಮ(ಪ್ರಥಮ), ಅಶ್ವತ್ಥಮ್ಮ(ದ್ವಿತೀಯ), ಆಂಜಿನಮ್ಮ(ತೃತೀಯ)ರಾದರು.
- Advertisement -
- Advertisement -
- Advertisement -