ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಅವರ ೧೨೬ ನೇ ಜಯತ್ಯುತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ದಲಿತಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿವಿಧ ಜಯಂತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರಿಲ್ ೧ ರಂದು ದೇವರ ದಾಸಿಮಯ್ಯ ಜಯಂತಿ, ಏಪ್ರಿಲ್ ೫ ರಂದು ಡಾ.ಬಾಬು ಜಗಜೀವನರಾಂ ಜಯಂತಿ, ಏಪ್ರಿಲ್ ೯ ರಂದು ಭಗವಾನ್ ಮಹಾವೀರ ಜಯಂತಿ, ಏಪ್ರಿಲ್ ೧೪ ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಏಪ್ರಿಲ್ ೨೯ ರಂದು ಬಸವ ಜಯಂತಿಯನ್ನು ಆಚರಿಸಲು ವಿವಿಧ ಮುಖಂಡರ ಸಭೆ ಕರೆಯಲಾಗಿತ್ತಾದರೂ ಸಭೆಯಲ್ಲಿ ಬಹುತೇಕ ದಲಿತ ಮುಖಂಡರು ಅಂಬೇಡ್ಕರ್ ಜಯಂತಿ ಆಚರಿಸಬೇಕಾದರೆ ಮೊದಲು ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸ್ಥಳ ಗುರುತಿಸಿ ಭವನ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಜಯಂತಿ ಆಚರಿಸುವುದು ಬೇಡ ಎಂದು ಪಟ್ಟು ಹಿಡಿದರು.
ಈ ಮದ್ಯೆ ಶಾಸಕ ಎಂ.ರಾಜಣ್ಣ ಮಾತನಾಡಿ ಅಂಬೇಡ್ಕರ್ ಭವನ ನಿರ್ಮಿಸಲು ಈಗಾಗಲೇ ಹನುಮಂತಪುರದ ಬಳಿ ೧ ಎಕರೆ ೩೭ ಗುಂಟೆ ಜಮೀನನ್ನು ಗುರುತಿಸಲಾಗಿದೆ ಎನ್ನುತ್ತಿದ್ದಂತೆ ಕೆಲ ಮುಖಂಡರು ದಲಿತರನ್ನು ಊರಿನಿಂದ ಹೊರಗಡೆ ಹಾಕುವ ಯೋಚನೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಿಡಬೇಕು. ಒಂದು ವೇಳೆ ಅಂಬೇಡ್ಕರ್ ಭವನ ನಿರ್ಮಿಸುವುದಾದರೆ ಅದು ನಗರದಲ್ಲಿಯೇ ಆಗಬೇಕು ಎಂದು ಪಟ್ಟುಹಿಡಿದರು.
ಮುಖಂಡರ ಸಲಹೆ ಸೂಚನೆ ಪಡೆದ ಶಾಸಕರು ಮುಖಂಡರ ಬೇಡಿಕೆಯಂತೆ ನಗರದ ಪ್ರವಾಸಿ ಮಂದಿರದ ಆವರಣ ಅಥವ ತೋಟಗಾರಿಕೆ ಇಲಾಖೆಯ ಆವರಣದೊಳಗೆ ನಿರ್ಮಿಸಲು ಸರ್ಕಾರದೊಂದಿಗೆ ಚರ್ಚಿಸಿ ಆದಷ್ಟು ಬೇಗ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಬಹುತೇಕ ಜಯಂತಿಗಳನ್ನು ನಗರದ ತಾಲ್ಲೂಕು ಕಚೇರಿ ಸಭಾಂಗಣದೊಳಗೆ ನೆರವೇರಿಸುವುದು. ಏಪ್ರಿಲ್ ೧೪ ರ ಅಂಬೇಡ್ಕರ್ ಜಯಂತಿಯನ್ನು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇ.ಓ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ, ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗು ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -