ನಮ್ಮ ತಾಲ್ಲೂಕಿನ ಜನತೆ ನೀರಿನ ಬವಣೆಯನ್ನು ಬಲ್ಲವರು. ಹನಿ ನೀರನ್ನೂ ಪೋಲು ಮಾಡಬಾರದು. ಹಸಿರು ಬೆಳೆಸಬೇಕು. ಮನೆಯಲ್ಲಿ ಬಳಸಿದ ನೀರಿನಿಂದ ಗಿಡಗಳನ್ನು ಬೆಳೆಸಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜು ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ವಿಶ್ವ ಜಲ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೀರು ನಮ್ಮ ಅಮೂಲ್ಯ ಸಂಪತ್ತು, ಅದನ್ನು ಮಿತವಾಗಿ ಬಳಸಿ. ನೀರು ನಾವು ಸೃಷ್ಟಿ ಮಾಡುವ ವಸ್ತುವಲ್ಲ, ಆದ್ದರಿಂದ ಅಂತಹ ಜೀವಜಲವನ್ನು ಹಿತಮಿತವಾಗಿ ಬಳಸುವುದು ಒಳಿತು. ನೀರಿನ ಅಭಾವದ ಅನುಭವವಿದ್ದೂ ಅದರ ಬಗ್ಗೆ ಎಚ್ಚರ ವಹಿಸದಿರುವುದು ತಪ್ಪಾಗುತ್ತದೆ. ನಮ್ಮ ದಿನನಿತ್ಯದ ಬಳಕೆಯಲ್ಲಿ ಅರಿವಿಲ್ಲದೇ ನೀರು ಪೋಲು ಮಾಡುತ್ತಿರುವುದು ಇನ್ನಾದರೂ ನಾವು ಗಮನಿಸಬೇಕಿದೆ. ಒಂದು ಕಡೆ ನೀರು ಸಿಗದೆ ಬರಗಾಲವೆಂದು ಒದ್ದಾಡುತ್ತಿದ್ದರೆ, ಮತ್ತೊಂದೆಡೆ ಬೇಕಾದಷ್ಟು ನೀರಿದೆಯೆಂದು ಬೇಕಾಬಿಟ್ಟಿ ಉಪಯೋಗಿಸುತ್ತಿದ್ದಾರೆ. ಈ ಅಂತರವನ್ನು ಆದಷ್ಟು ಬೇಗ ಹೋಗಲಾಡಿಸಬೇಕಾಗಿದೆ. ನಮ್ಮನ್ನು ನಾವು ತಿದ್ದಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ ಎಂದರು.
ಈ ಸಂದರ್ಭದಲ್ಲಿ ಬಯಲುಸೀಮೆ ಭಾಗದ ನೀರಿನ ಆಹಾಕಾರ ಹಾಗು ನೀರಿನ ಸದ್ಭಳಕೆಯ ಬಗ್ಗೆ ಶಾಲೆಯ ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಚಾಂದ್ ಪಾಷ ಮಾತನಾಡಿದರು.
ವಿಶ್ವ ಜಲ ದಿನಾಚರಣೆ ಅಂಗವಾಗಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸುವ ಮೂಲಕ ಜನರಲ್ಲಿ ನೀರಿನ ಸಂರಕ್ಷಣೆ ಹಾಗು ಮಿತಬಳಕೆಯ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಗಮ ಪಂಚಾಯಿತಿ ಸದಸ್ಯೆ ಉಮಾಚನ್ನೇಗೌಡ, ಶಿಕ್ಷಕರಾದ ಅಶೋಕ್, ಭಾರತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪಾ ರಾಮಚಂದ್ರ, ಗ್ರಾಮಸ್ಥರಾದ ಬಾಬು. ಶ್ರೀರಾಮ, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -