ತಾಲ್ಲೂಕಿನಲ್ಲಿ ಸ್ವಂತ ಮನೆ ಹಾಗೂ ನಿವೇಶನ ಇಲ್ಲದವರ ಸಮೀಕ್ಷೆ ನಡೆಸಿ ಕೂಡಲೆ ಮನೆ, ನಿವೇಶನ ಇಲ್ಲದವರ ಪಟ್ಟಿಯನ್ನು ನೀಡುವಂತೆ ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ಕಂದಾಯ, ತಾಲ್ಲೂಕು ಪಂಚಾಯಿತಿ, ಪಶು ಸಂಗೋಪನೆ, ಕುಡಿಯುವ ನೀರು ಪೂರೈಕೆ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿ, ಗ್ರಾಮ ಪಂಚಾಯಿತಿವಾರು ಮನೆ ಹಾಗೂ ನಿವೇಶನ ಇಲ್ಲದವರ ಪಟ್ಟಿಯನ್ನು ಮಾರ್ಚ್ ೪ರಂದು ನಡೆಯುವ ಸಭೆಗೆ ನೀಡುವಂತೆ ತಾಕೀತು ಮಾಡಿದರು.
ರಾಜ್ಯ ಸರ್ಕಾರ ಎಲ್ಲರಿಗೂ ನಿವೇಶನ ಹಾಗೂ ಮನೆ ನೀಡಲು ನಿರ್ಧರಿಸಿದ್ದು ೧೦ ಲಕ್ಷ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಿದೆ. ಆದರೆ ಬಹುತೇಕ ಮಂದಿ ನಿವೇಶನಗಳು ಇಲ್ಲದೆ ಮನೆ ಮಂಜೂರು ಆದರೂ ಮನೆ ಕಟ್ಟಿಕೊಳ್ಳದೆ ಇದ್ದಾರೆ. ಇದನ್ನರಿತ ರಾಜ್ಯ ಸರ್ಕಾರ ಮೊದಲು ನಿವೇಶನ ಇಲ್ಲದವರಿಗೆ ನಿವೇಶನ ನೀಡುವ ಹಾಗೂ ನಂತರ ಮನೆ ಮಂಜೂರು ಮಾಡಲು ನಿರ್ಧರಿಸಿದ್ದು ಇದಕ್ಕಾಗಿ ಮೊದಲ ಹಂತದಲ್ಲಿ ೫ ಲಕ್ಷ ಹಾಗೂ ನಂತರದಲ್ಲಿ ೫ ಲಕ್ಷ ಮನೆಗಳನ್ನು ಮಂಜೂರು ಮಾಡಲು ಮುಂದಾಗಿದೆ ಎಂದರು.
ಈ ೧೦ ಲಕ್ಷ ಮನೆ ಹಾಗೂ ನೀಡಲು ಉದ್ದೇಶಿಸಿರುವ ನಿವೇಶನಗಳಲ್ಲಿ ಶೇ. ೫೦ರಷ್ಟು ಪರಿಶಿಷ್ಟ ಜಾತಿ, ಪಂಗಡಕ್ಕೆ ಇನ್ನುಳಿದ ಶೇ. ೫೦ರಷ್ಟು ಇತರೆ ಸಮುದಾಯಕ್ಕೆ ನೀಡಲು ಉದ್ದೇಶಿಸಿದೆ ಎಂದು ಹೇಳಿದರು.
ಇದುವರೆಗೂ ಮಂಜೂರು ಆಗಿರುವ ಮನೆಗಳಲ್ಲಿ ಗ್ರಾಮ ಪಂಚಾಯಿತಿಗೆ ನಾಲ್ಕೈದು ಮನೆಗಳು ಇತರೆ ಸಮುದಾಯಕ್ಕೆ ಬಂದರೆ ಯಾರಿಗೆ ಹಂಚುವುದು ಯಾರಿಗೆ ಬಿಡುವುದು ಎಂಬ ಲೆಕ್ಕಾಚಾರದಲ್ಲಿ ಸಾಕಷ್ಟು ಮಂದಿ ಇತರೆ ವರ್ಗದವರು ವಸತಿ ಯೋಜನೆಗಳಿಂದ ವಂಚಿತರಾಗಿರುವ ವಿಚಾರ ಸರ್ಕಾರದ ಗಮನದಲ್ಲಿದೆ. ಎಲ್ಲಿ ಸರ್ಕಾರದ ಜಾಗ ಲಭ್ಯತೆ ಇಲ್ಲವೋ ಅಲ್ಲಿ ಖಾಸಗಿ ಜಮೀನನ್ನು ಖರೀದಿಸಿ ನಿವೇಶನಗಳನ್ನು ವಿತರಿಸಬೇಕಿದೆ. ಅದಕ್ಕಾಗಿ ಖಾಸಗಿ ಜಮೀನನ್ನು ಎಲ್ಲಿ ಎಷ್ಟು ಖರೀದಿಸಬೇಕೆಂದು ಅಂಕಿ ಅಂಶ ನೀಡಿದರೆ ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಅಗತ್ಯ ಹಣಕಾಸನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಈಗಾಗಲೆ ಮನೆ ಹಾಗೂ ನಿವೇಶನ ಇಲ್ಲದವರ ಪಟ್ಟಿಯನ್ನು ಬಹುತೇಕ ಪೂರ್ಣಗೊಳಿಸಿದ್ದು ಇನ್ನುಳಿದ ಪಟ್ಟಿಯನ್ನು ಮುಂದಿನ ಸಭೆಯೊಳಗೆ ನೀಡುವುದಾಗಿ ಹೇಳಿದ ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್, ಈಗಾಗಲೆ ನಿವೇಶನಗಳಿಗೆ ನೀಡಲು ೩೨ ಎಕರೆ ಜಮೀನನ್ನು ಗುರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಜಮೀನು ಇಲ್ಲ ಎಂದು ಸುಮ್ಮನಿದ್ದರೆ ಆಗದು, ಯಾವ ಊರಲ್ಲಿ ಖಾಸಗಿ ಜಮೀನನ್ನು ಖರೀದಿಸಬೇಕು, ಆ ಭಾಗದಲ್ಲಿ ಮಾರುಕಟ್ಟೆ ಮೌಲ್ಯ ಎಷ್ಟಿದೆ ಎಂಬ ಎಲ್ಲ ಮಾಹಿತಿಯನ್ನು ಒದಗಿಸಿದರೆ ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಹಣವನ್ನು ಮೀಸಲು ಇರಿಸುವುದಾಗಿ ತಿಳಿಸಿದರು.
ತಾಲ್ಲೂಕಿನಲ್ಲಿ ಈಗಾಗಲೆ ೬ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದು, ೧೪೪ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆ ದೋರಲಿದೆ ಎಂದು ಪಟ್ಟಿ ಮಾಡಿದ್ದು ಯಾವುದೆ ಕಾರಣಕ್ಕೂ ಪರಿಸ್ಥಿತಿ ಕೈ ಮೀರದಂತೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಪ್ರಭಾರಿ ಎಇಇ ಕೇಶವಮೂರ್ತಿಗೆ ಸಂಸದ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ತಹಸೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ್, ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಎಂ.ಕೇಶವಮೂರ್ತಿ, ಜೆಇ ರಮೇಶ್‌ಕುಮಾರ್, ಪಶು ಸಂಗೋಪನೆ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಂ.ಸತೀಶ್, ಕೆಪಿಟಿಸಿಎಲ್ ನಿರ್ದೆಶಕ ಭಕ್ತರಹಳ್ಳಿ ಬಿ.ವಿ.ಮುನೇಗೌಡ, ರೈಲ್ವೆ ಇಲಾಖೆಯ ಸಲಹಾ ಸಮಿತಿ ಸದಸ್ಯ ಕಂಬದಹಳ್ಳಿ ಜಗದೀಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -







