ರೈತರನ್ನು ಬಹಳಷ್ಟು ಕಾಡುತ್ತಿರುವ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸುವ ಸಲುವಾಗಿ ಸರ್ಕಾರ ಬಾಡಿಗೆ ಆಧಾರಿತ ಕೃಷಿ ಉಪಕರಣಗಳ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಹೋಬಳಿಗೊಂದರಂತೆ ಸೇವಾ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದಲ್ಲಿ ಮಂಗಳವಾರ ಕೃಷಿ ಯಂತ್ರಧಾರೆ ಯೋಜನೆಯಡಿ ಸ್ಥಾಪಿಸಿರುವ ಬಾಡಿಗೆ ಆಧಾರಿತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
ದಿನೇ ದಿನೇ ರೈತರ ಖರ್ಚುಗಳು ಜಾಸ್ತಿಯಾಗಿ ಉಳಿತಾಯ ಕಡಿಮೆಯಾಗಿ ವ್ಯವಸಾಯ ಲಾಭದಾಯಕವಲ್ಲ ಎಂಬ ಉದ್ದೇಶದಿಂದ ವ್ಯವಸಾಯ ಮಾಡಲು ಬಹಳಷ್ಟು ಮಂದಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ರೈತರ ತಮ್ಮ ಖರ್ಚುಗಳನ್ನು ಕಡಿಮೆ ಮಾಡಿ ಇಳುವರಿ ಜಾಸ್ತಿ ಮಾಡಿದಾಗ ವ್ಯವಸಾಯ ಲಾಭದಾಯಕವಾಗಿ ಪರಿಣಮಿಸುತ್ತದೆ ಎಂದರು.
ಸಣ್ಣ, ಅತಿ ಸಣ್ಣ ರೈತರು ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವುದು ಕಷ್ಟ ಸಾಧ್ಯ ಹಾಗಾಗಿ ಆಯಾ ಪ್ರದೇಶಕ್ಕೆ ತಕ್ಕಂತೆ ಕೃಷಿ ಯಂತ್ರೋಪಕರಣಗಳನ್ನು ಸರಕಾರವೇ ಖರೀದಿಸಿ ಸೇವಾ ಕೇಂದ್ರಗಳ ಮೂಲಕ ರೈತರಿಗೆ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದೆ.
ವ್ಯವಸಾಯಕ್ಕೆ ಕೃಷಿ ಕಾರ್ಮಿಕರು ಸಕಾಲಕ್ಕೆ ಲಭ್ಯವಾಗದ ಕಾರಣ ಕೃಷಿಕರ ಕೊರತೆ ನೀಗಿಸುವ ಉದ್ದೇಶದಿಂದ ಸರ್ಕಾರ ಚಿಂತನೆ ನಡೆಸಿ ಕೃಷಿ ಉಪಕರಣಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸೇವಾ ಕೇಂದ್ರ ಸ್ಥಾಪಿಸಿದೆ. ಸೇವಾ ಕೇಂದ್ರಗಳಲ್ಲಿರುವ ಯಂತ್ರೋಪಕರಣಗಳನ್ನು ನ್ಯಾಯಯುತ ಬಾಡಿಗೆಯ ಮೂಲಕ ಪಡೆಯುವುದರೊಂದಿಗೆ ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕವಾಗಿ ಮುಂದುವೆರಯಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಸಿಇಓ ಬಿ.ಬಿ.ಕಾವೇರಿ, ತಹಶೀಲ್ದಾರ್ ಮನೋರಮಾ, ಶಾಸಕ ಎಂ.ರಾಜಣ್ಣ, ಮಾಜಿ ಸಚಿವ ವಿ.ಮುನಿಯಪ್ಪ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷೆ ಪಿ.ನಿರ್ಮಲಾಮುನಿರಾಜು, ಸದಸ್ಯ ಬಂಕ್ಮುನಿಯಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಲಕ್ಮೀನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -