ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ವ್ಯಾಮೋಹದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ್‍ಜೋಷಿ ಹೇಳಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುದವಾರ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದರು.
ಅಹಿಂದ ಹೆಸರೇಳಿಕೊಂಡು ರಾಜಕೀಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪುತ್ರವ್ಯಾಮೋಹದಿಂದ ಅನಧಿಕೃತ ಅಧಿಕಾರಿಗಳ ಸಭೆ ನಡೆಸಲು ತಮ್ಮ ಪುತ್ರನನ್ನು ಬಿಟ್ಟಿರುವ ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಪುತ್ರನನ್ನು ರಾಜಕೀಯಕ್ಕೆ ತರಲು ಸಿದ್ದತೆ ನಡೆಸುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ ಎಂದು ಕರೆಯುತ್ತಿದ್ದ ಇದೇ ಸಿದ್ದರಾಮಯ್ಯನವರು ಇದೀಗ ಮಾಡುತ್ತಿರುವುದೇನು. ಈ ಬಗ್ಗೆ ಧ್ವನಿಯೆತ್ತಬೇಕಾಗಿದ್ದ ಕಾಂಗ್ರೆಸ್ ಪಕ್ಷದವರೂ ಮೌನವಾಗಿರುವುದು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಶಿಸುವ ಹಂತ ತಲುಪಿದೆ ಎಂದರು.
ಕೇವಲ ಕೇಂದ್ರ ಸರಕಾರ ಹಾಗು ನರೇಂದ್ರಮೋದಿಯವರ ಬಗ್ಗೆ ಕೆಟ್ಟದಾಗಿ ಮಾತಾಡುವುದೇ ವೃತ್ತಿಯನ್ನಾಗಿಸಿಕೊಂಡಿರುವ ಸಿದ್ದರಾಮಯ್ಯ ರಾಜ್ಯದ ಬರ ಪರಿಹಾರಕ್ಕಾಗಿ ತಮ್ಮ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದರು.
ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಯಾವುದೇ ಅನುಧಾನ ನೀಡುತ್ತಿಲ್ಲ ಎಂದು ಹೇಳುವ ಇವರು ಕೇಂದ್ರದಲ್ಲಿ ತಮ್ಮದೇ ಯುಪಿಎ ಸರಕಾರವಿದ್ದಾಗ ರಾಜ್ಯ ಸರಕಾರಕ್ಕೆ ನೀಡಿದ ಅನುಧಾನ ಹಾಗು ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರಕಾರಕ್ಕೆ ಬಂದಿರುವ ಅನುಧಾನಗಳ ಬಗ್ಗೆ ಪರಿಶೀಲನೆ ನಡೆಸಲಿ, ಹಿಂದೆ ಯುಪಿಎ ಸರಕಾರದ ವೇಳೆಯಲ್ಲಿ ರಾಜ್ಯ ಸರಕಾರ ಬೇಡಿಕೆಯಿಟ್ಟಿದ್ದ ಸುಮಾರು 17445 ಕೋಟಿ ಅನುದಾನಕ್ಕೆ ಕೇವಲ 691 ಕೋಟಿ ಮಾತ್ರ ನೀಡಿತ್ತು, ಆದರೆ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರಕಾರ ಬೇಡಿಕೆಯಿಟ್ಟ ಅನುದಾನದಲ್ಲಿ ಶೇ 60 ರಷ್ಟು ಅನುದಾನ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ರಾಜ್ಯಾದ್ಯಂತ ಇರುವ ನೀರು ಸಿಗದ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಆದೇಶ ಹೊರಡಿಸಿದ್ದರಾದರೂ ಈವರೆಗೂ ಯಾವುದೇ ಪ್ರಯೋಜನವಾಗದೇ ತೆರೆದ ಕೊಳವೆಬಾವಿಗಳಲ್ಲಿ ಪುಠಾಣಿ ಮಕ್ಕಳು ಬಿದ್ದು ಮೃತಪಡುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ ದಯವಿಟ್ಟು ತಮ್ಮ ತಲೆಗೆ ಹತ್ತಿಸಿಕೊಂಡಿರುವ ಭ್ರಮೆ ಹಾಗು ದುರಹಂಕಾರವನ್ನು ಕೂಡಲೇ ಬಿಡಿ ಎಂದರು.
ಇನ್ನು ಇದೇ ಮೇ 24 ರಿಂದ ಜೂನ್ 24 ರವರೆಗೂ ಪಕ್ಷದ ಸಂಸದರೂ ಸೇರಿದಂತೆ ಹಿರಿಯ ಮುಖಂಡರು ತಮ್ಮ ಸ್ವಕ್ಷೇತ್ರಗಳನ್ನು ಬಿಟ್ಟು ರಾಜ್ಯದ ವಿವಿದೆಡೆ ಪ್ರವಾಸ ಮಾಡಿ ನರೇಂದ್ರ ಮೋದಿ ಸರಕಾರದ ಸಾಧನೆಗಳು ವೈಯಕ್ತಿಕವಾಗಿ ಎಷ್ಟರ ಮಟ್ಟಿಗೆ ಮುಟ್ಟಿದೆ. ಹಾಗು ಮುಂಬರುವ ಚುನಾವಣೆಗೆ ಪಕ್ಷದ ಸಂಘಟನೆ ಯಾವ ರೀತಿಯಲ್ಲಾಗಬೇಕು ಎಂಬುದರ ಬಗ್ಗೆ ಬೂತ್ ಮಟ್ಟದ ಸಭೆಗಳನ್ನು ನಡೆಸಲು ಪಕ್ಷ ಸೂಚಿಸಿದ್ದ ಆ ಹಿನ್ನಲೆಯಲ್ಲಿ ಇಂದು ನಗರಕ್ಕೆ ಭೇಟಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಾ. ಮಂಜುನಾಥ್, ತಾಲೂಕು ಅಧ್ಯಕ್ಷ ಬಿ.ಸಿ. ನಂದೀಶ್, ಮುಖಂಡರಾದ ಜ್ಯೋತಿರೆಡ್ಡಿ, ನಿಕಟಪೂರ್ವ ತಾಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ನಗರಸಭೆ ಸದಸಯ ಎಸ್.ರಾಘವೇಂದ್ರ, ಭಾಸ್ಕರರೆಡ್ಡಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -