Sidlaghatta : ಕಳೆದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಘೋಷಿಸಿರುವಂತೆ ಮಾಸಿಕ ಒಂದು ಸಾವಿರ ರೂ ಸಂಬಳ ಹೆಚ್ಚಿಸಿ ಬಿಸಿಯೂಟ ತಯಾರಿಸುವ ಅಕ್ಷರ ದಾಸೋಹ ಸಿಬ್ಬಂದಿಗೆ ನೀಡಲು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಜರುಗಿಸಬೇಕು ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ ಒತ್ತಾಯಿಸಿದರು.
ಬಿಸಿಯೂಟ ನೌಕರರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ (ವಿಧಾನಸೌಧ ಚಲೋ) ಧರಣಿಯಲ್ಲಿ ಪಾಲ್ಗೊಳ್ಳಲು ಮಂಗಳವಾರ ನಗರದ ಬಸ್ ನಿಲ್ದಾಣದಿಂದ ತೆರಳಿದ ಬಿಸಿಯೂಟ ನೌಕರರ ತಂಡದ ನೇತೃತ್ವ ವಹಿಸಿ ಮಾತನಾಡಿದರು.
ಅಕ್ಷರ ದಾಸೋಹ ಯೋಜನೆಯಿಂದ ರಾಜ್ಯಾದ್ಯಂತ ಸುಮಾರು 56 ಲಕ್ಷ ಮಂದಿ ಮಕ್ಕಳು ಬಿಸಿಯೂಟ ಸೇವಿಸುವ ಮೂಲಕ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಖಾಸಗಿ ಶಾಲೆಗಳ ಪ್ರಭಾವ ಹೆಚ್ಚುತ್ತಿದ್ದರೂ ಸರ್ಕಾರಿ ಶಾಲೆಗಳ ಮಹತ್ವವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲದಂತಹ ವಾತಾವರಣವನ್ನು ನಿರ್ಮಿಸಲು ಬಿಸಿಯೂಟ ಯೋಜನೆಯ ಕಾಣಿಕೆ ಇದೆ. ಆದರೆ ಕಳೆದ 20 ವರ್ಷಗಳಿಂದ ಬಿಸಿಯೂಟ ತಯಾರಿಸುವ ನೌಕರರಿಗೆ ಸರ್ಕಾರ ನೀಡುತ್ತಿರುವ 3700 ರೂಗಳಿಂದ ಬಿಸಿಯೂಟ ನೌಕರರು ಜೀವನ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈ ಹಿಂದೆ ಬೆಂಗಳೂರು ಸೇರಿದಂತೆ ಬೆಳಗಾವಿ ಸುವರ್ಣಸೌಧದ ಮುಂಬಾಗ ಧರಣಿ ಮಾಡಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತಾದರೂ ಯಾವೊಂದು ಸರ್ಕಾರವೂ ಬಿಸಿಯೂಟ ನೌಕರರ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ ಎಂದರು.
ಅಕ್ಷರ ದಾಸೋಹ ಯೋಜನೆಯು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಯಬೇಕು. ಸಾದಿಲ್ವಾರು ಖಾತೆ ಜವಾಬ್ದಾರಿ ಮುಖ್ಯ ಅಡುಗೆ ನೌಕರರಿಗೆ ನೀಡಬೇಕು. ನಿವೃತ್ತಿ ಸಮಯದಲ್ಲಿ 1 ಲಕ್ಷ ಇಡಗಂಟು ನೀಡಬೇಕು. ಅಧಿಕಾರಕ್ಕೆ ಬಂದ ಕೂಡಲೇ ಬಿಸಿಯೂಟ ನೌಕರರಿಗೆ ಆರು ಸಾವಿರ ಸಂಬಳ ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಕೂಡಲೇ ಬಿಸಿಯೂಟ ನೌಕರರ ಸಂಬಳ ಹೆಚ್ಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯದರ್ಶಿ ಶಾಂತ, ಬಿಸಿಯೂಟ ನೌಕರರಾದ ಮಂಜುಳ, ಮೀನಾಕ್ಷಿ, ಯಶೋದಮ್ಮ, ಮಂಜುಳಮ್ಮ, ಕವಿತ, ಭವಾನಿ ಹಾಜರಿದ್ದರು.