Tatahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಮಕ್ಕಳ ಗೋಡೆ ಪತ್ರಿಕೆ “ಅವಲಕ್ಕಿ ಪವಲಕ್ಕಿ” ಮಕ್ಕಳಿಂದ ಬಿಡುಗಡೆ ಮಾಡಿಸಲಾಯಿತು.
ಗೋಡೆ ಪತ್ರಿಕೆಯಲ್ಲಿ ಮಕ್ಕಳೇ ಬರೆದ ಅನುಭವ ಕಥನಗಳು ಮತ್ತು ಪುಸ್ತಕ ಪರಿಚಯವಿದೆ. ತಿಂಗಳಿಗೊಮ್ಮೆ ಹೊರ ತರುವ ಗೋಡೆ ಪತ್ರಿಕೆಯಲ್ಲಿ ರಚಿಸುವ ಚಿತ್ರಗಳಿಂದ ಹಿಡಿದು ಎಲ್ಲಾ ಲೇಖನಗಳನ್ನೂ ಶಾಲಾ ವಿದ್ಯಾರ್ಥಿಗಳೇ ಬರೆಯುವರು.
ಗೋಡೆ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಮಕ್ಕಳೇ ನಿರ್ವಹಿಸಿದರು. ಅಧ್ಯಕ್ಷತೆ ನಂದಿತ, ಸ್ವಾಗತ ಮೈತ್ರಿ, ಪ್ರಾರ್ಥನೆ ಪಲ್ಲವಿ ತಂಡ, ವಂದನಾರ್ಪಣೆ ವೈಷ್ಣವಿ, ಭಾಷಣ ಚಂದನ ಮಾಡಿದರು.
ಮಕ್ಕಳು ಕವನ ವಾಚನ, ನಾಟಕ, ಭಾಷಣ, ಹಾಡು, ಏಕಪಾತ್ರಾಭಿನಯ, ರಸಪ್ರಶ್ನೆ ನಡೆಸಿಕೊಟ್ಟರು.
ಮುಖ್ಯಶಿಕ್ಷಕಿ ಎಚ್.ಎಂ.ಸರಸ್ವತಮ್ಮ, ಶಿಕ್ಷಕರಾದ ಸುದರ್ಶನ್, ಎ.ನಾಗರಾಜ, ಶಾಂತಮ್ಮ ಹಾಜರಿದ್ದರು.
