Sidlaghatta : ಕೃಷಿ ಪಂಪ್‌ಸೆಟ್‌ಗಳಿಗೆ ಹಾಗೂ ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಹಸಿರು ಸೇನೆ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ನಗರದ BESCOM ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರೈತರ ಬೇಡಿಕೆಗಳ ಬಗ್ಗೆ ಬೆಸ್ಕಾಂನ ಹಿರಿಯ ಅಧಿಕಾರಿಗಳು ಸ್ಪಷ್ಟವಾಗಿ ಉತ್ತರ ಹೇಳುವುದು ತಡವಾದ್ದರಿಂದ ರೈತರು ಪ್ರತಿಭಟನಾ ಸ್ಥಳದಲ್ಲೆ ಒಲೆ ಹಚ್ಚಿ ಅಡುಗೆ ಮಾಡಿ ಪ್ರತಿಭಟನಾ ರೈತರು ಊಟ ಮಾಡಿದ್ದಲ್ಲದೆ ಬೆಸ್ಕಾಂ ಇಲಾಖೆಯ ಅಧಿಕಾರಿ ಸಿಬ್ಬಂದಿಗೂ ಉಣಬಡಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಕೃಷಿ ಪಂಪ್ ಸೆಟ್‌ಗಳಿಗೆ ಏಳು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು, ಪ್ರತಿ ದಿನ ಸಂಜೆ 6 ರಿಂದ 9 ಗಂಟೆಯ ವೇಳೆ ತಪ್ಪದೆ ವಿದ್ಯುತ್ ಪೂರೈಕೆ ಮಾಡಬೇಕು.
ರೈತರಿಗೆ ಹಾಗೂ ಸಾರ್ವಜನಿಕರಿಗೆ ಈ ಸಮಯದಲ್ಲಿ ವಿದ್ಯುತ್ ಪೂರೈಕೆ ಅನುಕೂಲಕರ. ಆದರೆ ಇತೀಚೆಗೆ ಕಳೆದ 20 ದಿನಗಳಿಂದಲೂ ವಿದ್ಯುತ್ ಪೂರೈಕೆಯಲ್ಲಿ ಬಹಳ ವ್ಯತ್ಯಾಸವಾಗಿದೆ. ಕೇವಲ ದಾಖಲೆಗಳಲ್ಲಿ ಮಾತ್ರ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಆಗಿದೆ ಎಂದು ವರದಿ ಇರುತ್ತದೆ.
ವಾಸ್ತವದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ದುರಸ್ತಿ ಇದ್ದಾಗ ತೆಗೆಯುವ ವಿದ್ಯುತ್ ಸಂಪರ್ಕವನ್ನು ಮತ್ತೆ ಕೊಡಬೇಕು ಆದರೆ ಅದನ್ನು ಕೊಡುತ್ತಿಲ್ಲ. ಹಿರಿಯ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂಧಿಸುತ್ತಾರೆ. ಆದರೆ ಸಿಬ್ಬಂದಿಗಳು ಅಧಿಕಾರಿಗಳ ಮಾತನ್ನು ಕೇಳುತ್ತಿಲ್ಲ. ರೈತರು ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಎಂದು ದೂರಿದರು.
ವಿದ್ಯುತ್‌ನ ಅಸಮರ್ಪಕ ಪೂರೈಕೆಯಿಂದ ರೈತರ ಬೆಳೆಗಳು ಒಣಗಿ ನಾಶವಾಗುತ್ತಿವೆ. ಇದೆ ಪರಿಸ್ಥಿತಿ ಮುಂದುವರೆದರೆ ರೈತರಿಗೆ ಆಗುವ ನಷ್ಟವನ್ನು ಇಲಾಖೆಯಿಂದಲೆ ಭರಿಸಿಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಸ್ಯೆಯನ್ನು ಸರಿಪಡಿಸದಿದ್ದರೆ ವಾರದೊಳಗೆ ಎತ್ತು ಎಮ್ಮೆ ಕುರಿಗಳೊಂದಿಗೆ ಬೆಸ್ಕಾಂ ಕಚೇರಿಗೆ ಬಂದು ಅನಿರ್ಧಿಷ್ಟ ಧರಣಿಯನ್ನು ಮಾಡಬೇಕಾಗುತ್ತದೆ. ಹಾಗಾಗಿ ಕೂಡಲೆ ವಿದ್ಯುತ್ ಪೂರೈಕೆ ಸಮಸ್ಯೆಯನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.
ಚಿಂತಾಮಣಿ ಉಪ ವಿಭಾಗದ ಇಇ ಶೋಭ ಮಾತನಾಡಿ, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಈಗಲೂ ತ್ರಿಫೇಸ್ ವಿದ್ಯುತ್ತನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸಲು ಬದ್ದರಾಗಿದ್ದೇವೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಕಳೆದ ಐದಾರು ದಿನಗಳಿಂದ ಅಡಚಣೆ ಆಗಿರುವ ಬಗ್ಗೆ ವಿವರ ಪಡೆದುಕೊಂಡು ನಂತರ ಸರಿಪಡಿಸುತ್ತೇವೆ ಎಂದರು.
ಯಾವ ಯಾವ ಉಪ ಕೇಂದ್ರದಲ್ಲಿ ವಿದ್ಯುತ್ ಪೂರೈಕೆ ಎಷ್ಟು ಗಂಟೆಗಳ ಕಾಲ ಆಗುತ್ತಿದೆ ಎನ್ನುವ ಬಗ್ಗೆ ವರದಿ ತರಿಸಿಕೊಂಡು ಆಗಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಬಗೆಹರಿಸುವ ಭರವಸೆ ನೀಡಿದರು.
ಈ ಎಲ್ಲ ಸಮಸ್ಯೆಗಳನ್ನು ವಾರದೊಳಗೆ ಬಗೆಹರಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಇಲ್ಲವಾದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ರೈತರು ಪ್ರತಿಭಟನೆಯನ್ನು ಕೈ ಬಿಟ್ಟರು.
ಬೆಸ್ಕಾಂನ ಎಇಇ ಪ್ರಭು, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್, ವೀರಾಪುರ ಮುನಿನಂಜಪ್ಪ, ಬಿ.ನಾರಾಯಣಸ್ವಾಮಿ, ವೇಣುಗೋಪಾಲ್, ಬಸವರಾಜ್, ಬೀರಪ್ಪ, ಹಿತ್ತಲಹಳ್ಳಿ ರಮೇಶ್ ಹಾಜರಿದ್ದರು.