ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ “ಶಾಸನಗಳು, ವೀರಗಲ್ಲುಗಳ ಮೂಲಕ ಇತಿಹಾಸ ದರ್ಪಣ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಗ್ರಾಮದ ತೆಲುಗರ ಕೃಷ್ಣಪ್ಪ ಅವರ ತೋಟದಲ್ಲಿರುವ ಕ್ರಿ.ಶ. 870 ರ ಶಿಲಾ ಶಾಸನದಲ್ಲಿ ಕೊರೆದ ಹಳೆಗನ್ನಡ ಲಿಪಿಯನ್ನು ವಿವರಿಸಿ ಶಾಸನತಜ್ಞ ಧನಪಾಲ್ ಮಾತನಾಡಿದರು.
ಈ ಶಾಸನದಲ್ಲಿ ಹೇಳುವಂತೆ, “ಪಲ್ಲವ ನೊಳಂಬಾದಿರಾಜನ ಆಳ್ವಿಕೆಯಲ್ಲಿ ಕಕ್ಕರ ಎಂಬುವವನು ಮದಲೂರಿಗೆ(ಮಳ್ಳೂರು) ನುಗ್ಗಿ ಹಸುಗಳನ್ನು ಎಳೆದೊಯ್ಯುವಾಗ ತಿಂಗಣಿ ಮಾರನ ಮಗ ಮೇಲಿಯು ಅದನ್ನು ತಡೆದು ಹೋರಾಡಿ ವೀರಮರಣವನ್ನಪ್ಪಿದ. ಊರಿನ ಮಹಾಜನರು ಐದು ಕೊಳಗದಷ್ಟು ಬಿತ್ತುವ ಗದ್ದೆ ಮತ್ತು ಹೊಲವನ್ನು ಆತನ ಕುಟುಂಬದವರಿಗೆ ನೀಡಿದ್ದು, ಇದನ್ನು ಬೇರೆಯವರು ಅಪಹರಿಸಿದ್ದಲ್ಲಿ ಪಂಚಮಹಾಪಾತಕಗಳ ಪಾಪ ಸುತ್ತಿಕೊಳ್ಳುತ್ತದೆ” ಎಂದು ಬರೆದು, ವೀರನ ಚಿತ್ರವನ್ನೂ ಕೆತ್ತಲಾಗಿದೆ. ನಿಮ್ಮದೇ ಗ್ರಾಮದ ತಿಂಗಣಿ ಮಾರನ ಮಗ ಮೇಲಿ ಎಂಬುವವ ಹಸುಗಳನ್ನು ಕದ್ದೊಯ್ಯುವವರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದಾನೆ. ಆತನ ಬಗ್ಗೆ ಹೆಮ್ಮೆ, ಗೌರವ ಮತ್ತು ಕೃತಜ್ಞತೆಯನ್ನು ಹೊಂದಬೇಕು. ಭಕ್ತರಹಳ್ಳಿ ಗ್ರಾಮದ ಇತಿಹಾಸವನ್ನು 1200 ವರ್ಷಗಳ ಹಿಂದಕ್ಕೆ ಕರೆದೊಯ್ಯುವ ಶಾಸನವು ಗ್ರಾಮದಲ್ಲಿದೆ. ಅದಕ್ಕಾಗಿ ಈಗಿನ ಪೀಳಿಗೆಯ ಮಕ್ಕಳು ಹೆಮ್ಮೆಪಡಬೇಕು. ತಮ್ಮ ಗ್ರಾಮಕ್ಕೆ ಕೀರ್ತಿ ತಂದಿರುವ ಆ ವೀರರಂತೆ ಈಗಿನ ಮಕ್ಕಳು ಜಗಮೆಚ್ಚುವ ರೀತಿಯಲ್ಲಿ ಸಾಧಕರಾಗಬೇಕು ಎಂದು ಅವರು ತಿಳಿಸಿದರು.
ಈ ವೀರಗಲ್ಲುಗಳು ಮತ್ತು ಶಾಸನಗಳ ಕೆಳಗೆ ನಿಧಿ ಇರುವುದಿಲ್ಲ. ಈ ಊರಿಗಾಗಿ ಹೋರಾಡಿದ ವೀರರು ಮತ್ತು ಅವರ ಕಾಲದ ದಾಖಲೆಯೇ ಅಪೂರ್ವ ನಿಧಿಯಿದ್ದಂತೆ. ಈ ಶಾಸನ ಮತ್ತು ವೀರಗಲ್ಲುಗಳನ್ನು ಕಾಪಾಡಿಕೊಳ್ಳಬೇಕು. ಈ ರೀತಿಯ ಶಾಸನದ ಬಗ್ಗೆ ಊರಿನ ಐತಿಹ್ಯದ ಬಗ್ಗೆ ತಿಳಿದುಕೊಂಡಲ್ಲಿ ನಮ್ಮ ಗ್ರಾಮ್ಯಪರಂಪರೆಯ ಬಗ್ಗೆ ಹೆಮ್ಮೆ, ಅಭಿಮಾನ ಮೂಡುತ್ತದೆ. ಶಾಸನವೆಂದರೆ ರಾಜಾಜ್ಞೆ. ಹಸುಗಳನ್ನು ಕಾಪಾಡಿದ ವೀರರ ವೀರಗಲ್ಲಿಗೆ ತುರುಗೋಳ್ ಎನ್ನುತ್ತಾರೆ, ಹೆಣ್ಣುಮಕ್ಕಳನ್ನು ಅತ್ಯಾಚಾರಿಗಳಿಂದ ರಕ್ಷಿಸುವಾಗ ಮಡಿದವರ ವೀರಗಲ್ಲಿಗೆ ಪೆಣ್ಗುಯಿಲ್ ಎನ್ನುವರು. ಶಾಸನದಲ್ಲಿನ ಅಕ್ಷರಗಳನ್ನು ತೋರಿಸಿ ನಮ್ಮ ಕನ್ನಡ ಭಾಷೆಯ ಬೆಳವಣಿಗೆಯ ಬಗ್ಗೆಯೂ ವಿವರಿಸಿದರು.
ಭಕ್ತರಹಳ್ಳಿಯಲ್ಲಿನ ಇನ್ನೊಂದು ಗಡಿಕಲ್ಲನ್ನು ಮಕ್ಕಳಿಗೆ ತೋರಿಸಿ ಇದನ್ನು ವಾಮನಮುದ್ರಿತ ಕಲ್ಲು ಎನ್ನುತ್ತಾರೆ. ಅದರಲ್ಲಿ ಛತ್ರಿ ಹಿಡಿದಿರುವ ಬ್ರಾಹ್ಮಣನ ಚಿತ್ರವಿದೆ ಎಂದು ತೋರಿಸಿದರು. ಹತ್ತಿರವೇ ಎರಡು ಮರಗಳ ನಡುವೆ ಸೇರಿಕೊಂಡಿರುವ ಇನ್ನೊಂದು ಶಾಸನ ಕಲ್ಲನ್ನೂ ಸಹ ತೋರಿಸಿ ಮಕ್ಕಳಿಗೆ ವಿವರಿಸಿ ಇವುಗಳನ್ನೆಲ್ಲಾ ಸಂರಕ್ಷಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಗ್ರಾಮದ ಹಿರಿಮೆಯನ್ನು ಸಾರುವ, ಗ್ರಾಮದ ವಿರರ ನೆನಪುಗಳನ್ನು ಬಿಚ್ಚಿಡುವ, 1200 ವರ್ಷಗಳ ಪರಂಪರೆಯ ಪ್ರತಿನಿಧಿಗಳಾದ ಎರಡು ವೀರಗಲ್ಲುಗಳು ಮತ್ತು ಒಂದು ಗಡಿಕಲ್ಲನ್ನು ಶಾಲೆಯ ಆವರಣದಲ್ಲಿ ತಂದಿರಿಸಿ ಅದರ ಪಠ್ಯವನ್ನು ಬರೆದಿಟ್ಟು ಸಂರಕ್ಷಿಸಲಾಗುವುದು. ಇವು ನಮ್ಮ ಗ್ರಾಮದ ಹೆಮ್ಮೆ ಮತ್ತು ಅಭಿಮಾನದ ಸಂಕೇತ ಎಂದರು.
, ಟ್ರಸ್ಟಿ ಎಸ್.ನಾರಾಯಣಸ್ವಾಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ನಿವೃತ್ತ ಪ್ರಾಂಶುಪಾಲರಾದ ಡಾ.ರವಿಕಲಾ ಕಾಳಪ್ಪ, ಮುಖ್ಯಶಿಕ್ಷಕರಾದ ಪಂಚಮೂರ್ತಿ, ವೆಂಕಟಮೂರ್ತಿ ಹಾಗೂ ಶಿಕ್ಷಕರು ಹಾಜರಿದ್ದರು.