Devaramallur, Sidlaghatta : ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯು ಕೇವಲ ಉಪ ಕಸುಬಾಗಿಯೆ ಉಳಿದಿಲ್ಲ. ಇದೊಂದು ಉದ್ದಿಮೆಯಾಗಿ ವ್ಯಾಪಿಸುತ್ತಿದೆ. ಹಾಗಾಗಿ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಹೈನುಗಾರಿಕೆಯನ್ನು ಕೈಗೊಂಡು ಹೆಚ್ಚು ಆದಾಯಗಳಿಸಬೇಕೆಂದು ಕೋಚಿಮುಲ್ ನ ಶಿಡ್ಲಘಟ್ಟ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರೀಮಳ್ಳೂರಾಂಭ ದೇವಿಯ ರಥೋತ್ಸವದ ಜಾತ್ರೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಉತ್ತಮ ರಾಸುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಬಹುತೇಕ ರೈತರು ರೇಷ್ಮೆ ಕೃಷಿ ಹಾಗೂ ಸಾಮಾನ್ಯ ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಕೈಗೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲ ರೈತರು ಹೈನುಗಾರಿಕೆಯನ್ನೇ ಮುಖ್ಯ ಕಸುಬನ್ನಾಗಿ ಕೈಗೊಂಡಿದ್ದು ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ ಎಂದರು.
ಆದರೆ ಸಾಷಕ್ಟು ರೈತರು ತಮ್ಮ ಮಿಶ್ರ ತಳಿಯ ಸೀಮೆ ಹಸುಗಳಿಗೆ ವಿಮೆಯನ್ನು ಮಾಡಿಸಿಲ್ಲ. ತಾಲ್ಲೂಕಿನಲ್ಲಿ ಇರುವ ಸೀಮೆ ಹಸುಗಳಿಗೂ, ವಿಮೆಗೆ ಒಳಪಟ್ಟ ಸೀಮೆ ಹಸುಗಳ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ನಾನಾ ಕಾರಣಗಳಿಗೆ ಸೀಮೆ ಹಸು ಮೃತಪಟ್ಟರೆ ವಿಮೆ ಹಣ ನಿಮಗೆ ನೆರವಾಗಲಿದೆ ಎಂದರು.
ವಿಮೆಯ ಮೊತ್ತದ ಅರ್ಧದಷ್ಟು ರೈತರು ಹಾಗೂ ಇನ್ನರ್ಧ ಕೋಚಿಮುಲ್, ಡೈರಿಯಿಂದಲೂ ಭರಿಸಬಹುದು. ಈ ಸೌಲಭ್ಯವನ್ನು ಹೈನುಗಾರರು ಬಳಸಿಕೊಳ್ಳಬೇಕಿದೆ. ಈಗಿನ ಕಾಲದಲ್ಲಿ ಮಿಶ್ರ ತಳಿಯ ಸೀಮೆ ಹಸುಗಳು ಲಕ್ಷ ಲಕ್ಷ ಬೆಲೆ ಬಾಳುವುದರಿಂದ ವಿಮೆ ಮಾಡಿಸದೇ ಇದ್ದರೆ ಆರ್ಥಿಕವಾಗಿ ಹೆಚ್ಚು ಹೊರೆ ಆಗಬಹುದು ಎಂದು ಹೇಳಿದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿ.ಶ್ರೀನಾಥರೆಡ್ಡಿ ಮಾತನಾಡಿ, ನಮ್ಮೆಲ್ಲರ ಆರೋಗ್ಯ ಮಟ್ಟ ಸುಧಾರಿಸುವಲ್ಲಿ ಹಾಲು ಮತ್ತು ಮೊಟ್ಟೆ ಉತ್ತಮ ಪರಿಪೂರ್ಣವಾದ ಪೌಷ್ಠಿಕ ಆಹಾರವಾಗಿದೆ. ಆದರೆ ಸಾಕಷ್ಟು ರೈತರು ತಾವೇ ಉತ್ಪಾದಿಸುವ ಹಾಲನ್ನು ಕುಡಿಯುವುದಿಲ್ಲ ತಮ್ಮ ಮಕ್ಕಳಿಗೂ ಕುಡಿಯಲು ಕೊಡದೇ ಇರುವುದು ಬೇಸರದ ವಿಚಾರ ಎಂದರು.
ದಿನ ನಿತ್ಯ ಹಾಲು ಹಾಗೂ ಮೊಟ್ಟೆಯನ್ನು ಸೇವಿಸಿ ಉತ್ತಮವಾದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ರೂಪಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು. ಈಗಿನ ಕಾಲದಲ್ಲಿ ಸಾಕಷ್ಟು ತಾಂತ್ರಜ್ಞಾನ ಮುಂದುವರೆದಿದ್ದು ಅದನ್ನು ಹಾಗೂ ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಹೈನುಗಾರಿಕೆಯನ್ನು ಲಾಭದಾಯಕವಾಗಿ ನಡೆಸಿ ಎಂದು ರೈತರಲ್ಲಿ ಮನವಿ ಮಾಡಿದರು.
ಉತ್ತಮ ರಾಸುಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಿಶ್ರ ತಳಿ ಸೀಮೆ ಹಸು, ಎಮ್ಮೆ ಹಾಗೂ ನಾಟಿ ಹಸುಗಳ ವಿಭಾಗದಲ್ಲಿ ತಲಾ ಮೂವರಿಗೆ ಬಹುಮಾನವನ್ನು ನೀಡಲಾಯಿತು.
ಪಶು ವೈದ್ಯಾಕಾರಿ ಡಾ.ಎ.ಜಿ.ಪ್ರಶಾಂತ್, ಡಾ.ರಮೇಶ್, ಕೋಚಿಮುಲ್‌ನ ಶಿಡ್ಲಘಟ್ಟ ಶಿಬಿರ ಕಚೇರಿಯ ಸಹಾಯಕ ವ್ಯವಸ್ಥಾಫಕ ಡಾ.ಡಿ.ವಿ.ಹರೀಶ್, ವೈ.ಹುಣಸೇನಹಳ್ಳಿಯ ಪಶು ವೈದ್ಯಾಕಾರಿ ಡಾ.ಎನ್.ಮಂಜೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಉತ್ತಮ ರಾಸುಗಳಿಗೆ ಬಹುಮಾನ ಘೋಷಿಸಿದರು.
ದೇವರಮಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ರವಿಚಂದ್ರ, ಕೋಚಿಮುಲ್‌ನ ಮಹಿಳಾ ನಿರ್ದೆಶಕಿ ಸುನಂದಮ್ಮ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಡೇರಿ ಉಪಾಧ್ಯಕ್ಷ ಡಿ.ಎನ್.ಕೃಷ್ಣಪ್ಪ, ಸದಸ್ಯರಾದ ನಂಜುಂಡಪ್ಪ, ಆನಂದಪ್ಪ, ಲಕ್ಷ್ಮಯ್ಯ, ವೆಂಕಟರಾಯಪ್ಪ, ರಾಮಚಂದ್ರಪ್ಪ, ಮುಖಂಡರಾದ ಸೊಣ್ಣಪ್ಪ, ವೆಂಕಟೇಶ್, ದೇವರಾಜ್, ಡೇರಿ ಕಾರ್ಯದರ್ಶಿ ವಿ.ಮಂಜುನಾಥ್ ಹಾಜರಿದ್ದರು.