ಕುಂದುಕೊರತೆ ಸಭೆಗೆ ಶೇ 70ರಷ್ಟು ಅಧಿಕಾರಿಗಳು ಗೈರು: ಸಭೆ ಬಹಿಷ್ಕರಿಸಿ ಹೊರನಡೆದ ಮುಖಂಡರು

Sidlaghatta : ಶಿಡ್ಲಘಟ್ಟ ತಾಲ್ಲೂಕು ಆಡಳಿತ ಸೋಮವಾರ ಕರೆದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST) ಜನರ ಕುಂದುಕೊರತೆ ಸಭೆಗೆ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ (EO) ಹಾಗೂ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ಹಲವು ಪ್ರಮುಖ ಅಧಿಕಾರಿಗಳು ಗೈರುಹಾಜರಾದರು. ಇದನ್ನು ಖಂಡಿಸಿ ದಲಿತ ಸಂಘಟನೆಗಳ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಸೂರು, ರಸ್ತೆ ಮತ್ತು ಸ್ಮಶಾನದ ಸಮಸ್ಯೆಗಳ ಕುರಿತು ಈ ಸಂಘಟನೆಗಳು ಈ ಹಿಂದೆಯೇ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ್ದವು.
ಶೇ 70ರಷ್ಟು ಅಧಿಕಾರಿಗಳು ಸಭೆಗೆ ಬಾರದಿರುವುದು ದಲಿತರ ಸಮಸ್ಯೆಗಳ ಬಗ್ಗೆ ಆಡಳಿತಕ್ಕೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಮೇಲೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಹಲವು ವರ್ಷಗಳ ನಂತರ ದಲಿತರ ಕುಂದುಕೊರತೆ ಆಲಿಸಲು ಸಭೆ ಕರೆದರೂ, ಸಮಸ್ಯೆ ಪರಿಹರಿಸಬೇಕಾದ ಪ್ರಮುಖ ಅಧಿಕಾರಿಗಳೇ ಗೈರಾಗಿರುವುದು ಸಮುದಾಯಕ್ಕೆ ಮಾಡಿದ ಅವಮಾನ. ಹೀಗಾದರೆ ಸಭೆ ನಡೆಸುವ ಉದ್ದೇಶವೇ ಅರ್ಥಹೀನ ಎಂದು ಅವರು ಹೇಳಿದರು.
ಮುಖಂಡರು ಮಾಡಿದ ಆರೋಪಗಳೇನು?
ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸಂಬಂಧಿಸಿದಂತೆ ಮಂಜುನಾಥ್ ಅವರು ಈ ಆರೋಪಗಳನ್ನು ಮಾಡಿದರು:
- ನಿವೇಶನ, ಜಮೀನು ಹಾಗೂ ಸ್ಮಶಾನಕ್ಕೆ ಜಾಗ ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ.
- ಭೂ ಮಂಜೂರಾತಿಗಾಗಿ ಫಾರಂ 50, 51 ಮತ್ತು 53ರ ಅಡಿ ಸಲ್ಲಿಸಿರುವ ಅನೇಕ ಅರ್ಜಿಗಳು ವರ್ಷಗಳಿಂದ ವಿಲೇವಾರಿಯಾಗದೆ ಬಾಕಿ ಉಳಿದಿವೆ.
- ಅರ್ಹ ಫಲಾನುಭವಿಗಳಿಗೆ ಅರ್ಧ ಎಕರೆ ಜಮೀನು ನೀಡಲೂ ಆಡಳಿತ ಮುಂದಾಗುತ್ತಿಲ್ಲ.
- ತಾಲ್ಲೂಕಿನಲ್ಲಿ ದಲಿತ ವಿರೋಧಿ ನೀತಿ ಹಾಗೂ ಭ್ರಷ್ಟಾಚಾರ ನಡೆಯುತ್ತಿದ್ದು, ನಿರಂತರ ಅನ್ಯಾಯವಾಗುತ್ತಿದೆ.
- ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಕೆ ಹೆಚ್ಚಾಗಿದೆ.
- ಪಿಟಿಸಿಎಲ್ (PTCL) ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನ್ಯಾಯವಾಗುವ ರೀತಿಯಲ್ಲಿ ತೀರ್ಪುಗಳು ಬರುತ್ತಿವೆ.
ಮುಖಂಡರ ಒತ್ತಾಯವೇನು?
ಜಿಲ್ಲಾಧಿಕಾರಿಗಳು ಕೂಡಲೇ ಶಿಡ್ಲಘಟ್ಟಕ್ಕೆ ಭೇಟಿ ನೀಡಿ ದಲಿತ ಸಂಘಟನೆಗಳ ಮುಖಂಡರ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಂಜುನಾಥ್ ಎಚ್ಚರಿಕೆ ನೀಡಿದರು.
ದಸಂಸ ಮುಖಂಡ ವೆಂಕಟೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕರೆದಿದ್ದ ಸಭೆಗೆ ಶೇ 70ರಷ್ಟು ಅಧಿಕಾರಿಗಳು ಬಾರದಿರುವುದು ದಲಿತರ ಸಮಸ್ಯೆಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. ಸಮಸ್ಯೆಗಳು ಬಗೆಹರಿಯುವ ಭರವಸೆಯನ್ನೇ ಕಳೆದುಕೊಂಡಿದ್ದೇವೆ ಎಂದರು. ಗೈರಾದ ಅಧಿಕಾರಿಗಳ ವಿರುದ್ಧ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಜಿಲ್ಲಾಧಿಕಾರಿಗಳೇ ತಾಲ್ಲೂಕಿಗೆ ಭೇಟಿ ನೀಡಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರ ಸಭೆ ನಡೆಸಿ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ಜಿಲ್ಲಾ ಸಮಿತಿ ಸದಸ್ಯ ದಿಬ್ಬೂರಹಳ್ಳಿ ಗೊರಲಪ್ಪ, ತಾಲ್ಲೂಕು ಸಂಚಾಲಕ ಎ.ಎಲ್. ನಾರಾಯಣಸ್ವಾಮಿ, ಶಿವರಾಜ್, ಕೃಷ್ಣಯ್ಯ, ದೇವರಾಜು, ಅಂಜಿನಪ್ಪ, ರಮೇಶ್, ವರಸಂದ್ರ ನಾರಾಯಣಸ್ವಾಮಿ, ಹೇಮಾರ್ಲಹಳ್ಳಿ ಮುನಿಯಪ್ಪ, ದಿಬ್ಬೂರಹಳ್ಳಿ ಚಿಕ್ಕನರಸಿಂಹಯ್ಯ, ಅಬ್ಲೂಡು ತಿರುಮಳಪ್ಪ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
FAQ
What happened at the SC/ST grievance meeting in Sidlaghatta?
Dalit organisation leaders boycotted the meeting called by the taluk administration because key officials, including the tahsildar, EO and police circle inspector, were absent.
What are the leaders demanding?
They want the Deputy Commissioner to visit the taluk and hold a meeting with all departments, action against officials who skipped the meeting, and resolution of pending house site, land grant and graveyard issues.

For Daily Updates WhatsApp ‘HI’ to 7406303366
Summary in English
Leaders of Dalit organisations boycotted the SC/ST grievance meeting called by the Sidlaghatta taluk administration on Monday after key officials, including the tahsildar, the Executive Officer (EO) and the police circle inspector, stayed away. Karnataka Dalit Sangharsha Samiti state leader Melur Manjunath said about 70% of officials were absent, alleging that house sites, land grants (Form 50, 51 and 53 applications) and graveyard land remain pending for years and that PTCL (Prohibition of Transfer of Certain Lands) Act cases are being decided unfairly. The leaders demanded that the Deputy Commissioner visit the taluk, hold a meeting with all departments and act against absent officials, warning of a fierce agitation otherwise.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


