Devaramallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಪಂಚಶಕ್ತಿ ದೇವತೆಗಳ ದಿವ್ಯ ಕ್ಷೇತ್ರವಾದ ಶ್ರೀಮಳ್ಳೂರಾಂಭ ದೇವಾಲಯದಲ್ಲಿ ಸೋಮವಾರ ವಿಜೃಂಭಣೆಯಿಂದ ಉಯ್ಯಾಲೋತ್ಸವ ಆಚರಣೆ ನಡೆಯಿತು.
ಶ್ರೀ ಮಳ್ಳೂರಾಂಭೆಯ ಉತ್ಸವ ಮೂರ್ತಿಯನ್ನು ಅಲಂಕರಿಸಿ, ನಾದಸ್ವರ, ಡೋಲು ಮತ್ತು ಇನ್ನಿತರೆ ಜನಪದ ಕಲಾತಂಡಗಳೊಂದಿಗೆ ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ, ಉತ್ಸವ ಮೂರ್ತಿಯನ್ನು ಅಲಂಕೃತ ಉಯ್ಯಾಲೆ (ತೂಗು ಸೇವೆ)ಯಲ್ಲಿ ಪ್ರತಿಷ್ಠಾಪಿಸಿ ಛಾಮರದ ಸೇವೆ ಸಲ್ಲಿಸಿ, ಪೂಜಿಸಿ ನಮಿಸಲಾಯಿತು.
ದೇವಿಯನ್ನು ಕೂರಿಸಿದ್ದ ಉಯ್ಯಾಲೆಯನ್ನು ಮೂರು ಬಾರಿ ತೂರಿ, ಭಕ್ತರು ಮೂರು ಸುತ್ತು ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ತಾಯಿಯಲ್ಲಿ ಭಕ್ತಿಯಿಂದ ಬೇಡಿಕೊಂಡರು.
ಸೇವೆ ಮತ್ತು ಅನ್ನಸಂತರ್ಪಣೆ:
ಉಯ್ಯಾಲೋತ್ಸವದ ಅಂಗವಾಗಿ, ಪಂಚಾಕ್ಷರಿರೆಡ್ಡಿ ಕುಟುಂಬದವರು ನೆರೆದಿದ್ದ ಎಲ್ಲ ಮಹಿಳಾ ಭಕ್ತರಿಗೂ ಅರಿಶಿಣ-ಕುಂಕುಮ ನೀಡಿ ವಸ್ತ್ರದಾನ ಮಾಡುವ ಮೂಲಕ ಸೇವೆ ಸಲ್ಲಿಸಿದರು. ಇದರ ಜೊತೆಗೆ, ಸಾಮೂಹಿಕ ಅನ್ನಸಂತರ್ಪಣೆಯೂ ನಡೆಯಿತು.
ದೇವರಮಳ್ಳೂರು ವಕೀಲ ಸುಬ್ರಮಣಿ ಕುಟುಂಬ ಮತ್ತು ಕೊತ್ತನೂರು ಪಂಚಾಕ್ಷರಿರೆಡ್ಡಿ ಕುಟುಂಬದವರು ಈ ಉಯ್ಯಾಲೋತ್ಸವವನ್ನು ನಡೆಸಿ ಕೊಟ್ಟರು.
ಶ್ರೀಮಳ್ಳೂರಾಂಭೆ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮುನಿರಾಜುಗೌಡ, ಕಾರ್ಯದರ್ಶಿ ವೇಣುಗೋಪಾಲ್, ಅರ್ಚಕ ಹರೀಶ್ ಸೇರಿದಂತೆ ಕೊತ್ತನೂರು ಪಂಚಾಕ್ಷರಿರೆಡ್ಡಿ, ಸ್ವರೂಪ್ ರೆಡ್ಡಿ ಮತ್ತು ಅನೇಕ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.








