ನಗರದ ಸಂತೆ ಮೈದಾನದ ಬಳಿ 15ನೇ ಹಣಕಾಸು ಯೋಜನೆಯಡಿ ಒಟ್ಟು 49 ಲಕ್ಷ ರೂ.ವೆಚ್ಚದಲ್ಲಿ ಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಮಾತನಾಡಿದರು.
ಶಿಡ್ಲಘಟ್ಟದಲ್ಲಿ ಹೆಚ್ಚಾಗಿ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳು ಚರಂಡಿಯನ್ನು ಸೇರಿ ಅಲ್ಲಿಂದ ಕೆರೆಗಳಿಗೆ ಹರಿದು ಅಂತರ್ಜಲ ಕಲುಷಿತಗೊಳ್ಳಲು ಕಾರಣವಾಗುತ್ತಿದೆ. ನಗರದಲ್ಲಿನ ಬಹುತೇಕ ಚರಂಡಿಯ ನೀರು ಸಂತೆ ಬಳಿ ಸೇರಿ ಅಲ್ಲಿಂದ ಕೆರೆಗೆ ಹರಿಯುತ್ತದೆ. ಸಾವಿರಾರು ಸಂಖ್ಯೆಯಲ್ಲಿರುವ ರೇಷ್ಮೆನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವು ಸಹಜವಾಗಿ ಚರಂಡಿಯನ್ನು ಸೇರಿ ಅಲ್ಲಿಂದ ಕೆರೆಯನ್ನು ಸೇರಿ ಅಲ್ಲಿನ ಅಂತರ್ಜಲವೂ ಕಲುಷಿತವಾಗುತ್ತಿದೆ.
ಕೆರೆಯಂಗಳದಲ್ಲೆ ನಗರಕ್ಕೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದ್ದು ಕಲುಷಿತ ಅಂತರ್ಜಲದಿಂದ ನಮ್ಮೆಲ್ಲರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಕಾರಣ ಅದನ್ನು ತಪ್ಪಿಸಲು ಈ ಶುದ್ದೀಕರಣ ಘಟಕವನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಸಂತೆ ಮೈದಾನದ ಬಳಿ ಶುದ್ಧೀಕರಣ ಘಟಕವನ್ನು ನಿರ್ಮಿಸುತ್ತಿದ್ದು, ಅಲ್ಲಿ ಚರಂಡಿಯ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ತ್ಯಾಜ್ಯವನ್ನು ಬೇರ್ಪಡಿಸಿ ಶುದ್ಧ ನೀರನ್ನು ಕೆರೆಗೆ ಹರಿದು ಬಿಡಲಾಗುತ್ತದೆ. ಬೇರ್ಪಡಿಸಿದ ತ್ಯಾಜ್ಯವು ಉತ್ತಮ ಗೊಬ್ಬರವಾಗಲಿದ್ದು, ಮುಂದೆ ಅದರಿಂದಲೂ ನಗರಸಭೆಗೆ ಆದಾಯ ಬರಲಿದೆ ಎಂದರು.
ಈಗಾಗಲೆ ಗೌಡನಕೆರೆಯ ಒಂದು ಅಂಚಿನಲ್ಲಿ ನಾಗರಿಕರ ವಾಯು ವಿಹಾರದ ಪಾದಚಾರಿ ಪಥ ನಿರ್ಮಾಣ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಿದ್ದು ಅಲ್ಲಿ ತ್ಯಾಜ್ಯದ ನೀರು ಸಂಗ್ರಹವಾಗುವುದು ಸರಿಯಾಗಿ ಕಾಣುವುದಿಲ್ಲ. ಅದಕ್ಕಾಗಿ ಈ ಕಾರ‍್ಯವನ್ನು ಮಾಡುತ್ತಿದ್ದೇವೆ ಎಂದರು.
ನಗರಸಭೆ ಉಪಾಧ್ಯಕ್ಷ ಬಿ.ಅಪ್ಸರ್‌ಪಾಷ, ಮುಖಂಡ ರಮೇಶ್, ಸದಸ್ಯರಾದ ಸರೇಶ್, ಶಬ್ಬೀರ್, ಮೌಲ, ಆಸೀಪ್, ನಿಜಾಮ್, ಸಮೀವುಲ್ಲ, ನವೀನ್, ಲಕ್ಷ್ಮೀನಾರಾಯಣ್ ಹಾಜರಿದ್ದರು.