ಸೂರು, ರಸ್ತೆ, ಸ್ಮಶಾನ: 79 ವರ್ಷವಾದರೂ ಸಿಗದ ಸೌಕರ್ಯ; ನ.23ಕ್ಕೆ ದಸಂಸ ಪ್ರತಿಭಟನೆ

Sidlaghatta : ತಾಲ್ಲೂಕು ಆಡಳಿತದ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ನವೆಂಬರ್ 23ರಂದು ತಾಲ್ಲೂಕು ಕಚೇರಿ ಎದುರು ದಸಂಸ ಪ್ರತಿಭಟನೆ ನಡೆಸಲಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಎ. ಚಲಪತಿ ತಿಳಿಸಿದರು.
ಸಮಿತಿ ಮಾಡಿರುವ ಆರೋಪಗಳು
ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ತಾಲ್ಲೂಕಿನ ದಲಿತರಿಗೆ ವಾಸಕ್ಕೆ ಸೂರು, ಸಂಚರಿಸಲು ರಸ್ತೆ ಹಾಗೂ ಅಂತ್ಯಕ್ರಿಯೆಗೆ ಸ್ಮಶಾನದಂತಹ ಮೂಲಸೌಕರ್ಯ ಸಿಕ್ಕಿಲ್ಲ ಎಂದು ಆರೋಪಿಸಿದರು.
ಈ ಕುರಿತು ತಹಶೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದೂರವಾಣಿ ಕರೆಗಳಿಗೂ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಅವರು ದೂರಿದರು. ಸಮಿತಿಯು 1970ರ ದಶಕದಿಂದಲೂ ದಲಿತರು, ರೈತರು ಮತ್ತು ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಇಂತಹ ಸಂಘಟನೆಯ ಮುಖಂಡರ ಹಾಗೂ ಬಡವರ ಸಮಸ್ಯೆಗಳನ್ನು ತಾಲ್ಲೂಕು ಆಡಳಿತ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಬೇಡಿಕೆಗಳು
ತಾಲ್ಲೂಕು ಸಂಚಾಲಕ ಲಕ್ಕೇನಹಳ್ಳಿ ವೆಂಕಟೇಶ್ ಮಾತನಾಡಿ, ದಲಿತ ಕಾಲೊನಿಗಳಲ್ಲಿರುವ ನಿವೇಶನರಹಿತರಿಗೆ ತಕ್ಷಣ ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ದರಖಾಸ್ತು ಸಮಿತಿಯನ್ನು ರಚಿಸಿ, 53 ಮತ್ತು 57ನೇ ನಮೂನೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸಬೇಕು, ದಲಿತ ಕಾಲೊನಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದೂ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಸಂಘಟನಾ ಸಂಚಾಲಕ ಹುಜಗೂರು ವೆಂಕಟೇಶ್, ತುಮ್ಮನಹಳ್ಳಿ ಚನ್ನಕೇಶವ, ನರಸಿಂಹ (ಎನ್.ಟಿ.ಆರ್), ಡಿ.ಸಿ. ನರಸಿಂಹಮೂರ್ತಿ, ಖಜಾಂಚಿ ಅನಿಲ್‌ಕುಮಾರ್, ಪದಾಧಿಕಾರಿಗಳಾದ ಮುನಿಕೃಷ್ಣಪ್ಪ ಮತ್ತು ಸಿಂತಡಿಪಿ ಗೋಪಾಲ್ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ದಲಿತರ ಬೇಡಿಕೆ ಈಡೇರಿಸಲು ಆಗ್ರಹ; ಕದಸಂಸ ಪದಾಧಿಕಾರಿಗಳಿಂದ ಧರಣಿ | ನಾಗಪುರದ ದೀಕ್ಷಾಭೂಮಿಗೆ ದಲಿತ ಸಂಘರ್ಷ ಸಮಿತಿಯ ಧಮ್ಮಯಾತ್ರೆ

For Daily Updates WhatsApp ‘HI’ to 7406303366
Summary in English
The Dalit Sangharsha Samiti (DSS) will hold a protest in front of the taluk office on November 23 against what it calls the taluk administration’s anti-Dalit approach, said district organising convener T.A. Chalapathi at a press meet on Wednesday. He alleged that 79 years after Independence, Dalits in the taluk still lack basic needs such as housing, roads and a graveyard, and that repeated petitions to the tahsildar have brought no response. Taluk convener Lakkenahalli Venkatesh demanded house sites for the landless in Dalit colonies, formation of a darkhast committee, cultivation certificates for farmers who applied under Forms 53 and 57, and basic amenities in the colonies. Leaders of various organisations are expected to join the protest, and the public has been urged to take part.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


