ರೇಷ್ಮೆ ಕೃಷಿ ನೋಡಲು ಬಂದ ಜರ್ಮನಿ, ಬಂಗಾಳದ ವಿನ್ಯಾಸಕರು: ರೈತನ ಯಂತ್ರದ ಬೇಡಿಕೆಗೆ ಉತ್ತರ ಸಿಗುವುದೇ?

Bio Design South Asia team of designers and experts with farmer Gopalagowda in his mulberry silk farm

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಪ್ರಗತಿಪರ ರೈತ ಎಚ್.ಜಿ. ಗೋಪಾಲಗೌಡ ಅವರ ರೇಷ್ಮೆ ಕೃಷಿ ಪದ್ಧತಿ ಹಾಗೂ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಲು ಭಾನುವಾರ ದೇಶ-ವಿದೇಶಗಳ ತಜ್ಞರ ತಂಡ ಭೇಟಿ ನೀಡಿತು.

‘ಬಯೋ ಡಿಸೈನ್ ಸೌತ್ ಏಷ್ಯಾ’ ಯೋಜನೆಯಡಿ ಬೆಂಗಳೂರಿನ ಬಯೋ ಡಿಸೈನ್ ಬೆಂಗಳೂರು ಲ್ಯಾಬ್ ತಂಡದ ಸದಸ್ಯರು, ಜರ್ಮನಿಯ ತಜ್ಞರು ಹಾಗೂ ಪಶ್ಚಿಮ ಬಂಗಾಳದ ವಿನ್ಯಾಸಕರು ಸೇರಿದಂತೆ ಸುಮಾರು 15 ಮಂದಿ ಗೋಪಾಲಗೌಡ ಅವರ ರೇಷ್ಮೆ ತೋಟಕ್ಕೆ ಭೇಟಿ ನೀಡಿ ರೇಷ್ಮೆ ಕೃಷಿಯ ವಿವಿಧ ಹಂತಗಳು, ರೈತರು ಅನುಸರಿಸುತ್ತಿರುವ ಪದ್ಧತಿಗಳು ಹಾಗೂ ಕೃಷಿಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

ತಂಡದಲ್ಲಿ ಬೆಂಗಳೂರಿನಲ್ಲಿ ಜವಳಿ ವಿನ್ಯಾಸ ಮತ್ತು ತಂತ್ರಜ್ಞಾನ ಶಿಕ್ಷಣ ಪಡೆದಿರುವ ತಜ್ಞರ ಜತೆಗೆ ಜರ್ಮನಿಯ ಕಾರ್ಲ್ಸ್‌ರೂಹೆ ಕಾಲೇಜಿನಿಂದ ಯೋಜನೆಗಾಗಿ ವಿದ್ಯಾರ್ಥಿವೇತನದಡಿ ಆಗಮಿಸಿರುವ ಹೆಲೆನಾ ಮತ್ತು ಪೀಟರ್ ಇದ್ದರು. ಪಶ್ಚಿಮ ಬಂಗಾಳದ ವಿನ್ಯಾಸಕಿ ಮೃದುಲ ಅವರು ಅಲ್ಲಿನ ರೇಷ್ಮೆ ಕೃಷಿ ಮತ್ತು ರೇಷ್ಮೆ ಗೂಡುಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು. ಅಲ್ಲಿಂದ ತಂದಿರುವ ರೇಷ್ಮೆ ಗೂಡುಗಳನ್ನು ಇಲ್ಲಿನ ಪರಿಸರದಲ್ಲಿ ಪ್ರಯೋಗಕ್ಕೆ ಬಳಸುವ ಉದ್ದೇಶ ಹೊಂದಿದ್ದಾರೆ.

Designers and experts watching silkworms on mulberry leaves in a rearing shed

ತಂಡದ ಭೇಟಿಯ ಉದ್ದೇಶವೇನು?

ರೈತರ ಸಮಸ್ಯೆಗಳಿಗೆ ವಿಜ್ಞಾನಿಗಳು, ಕಲಾವಿದರು ಹಾಗೂ ವಿನ್ಯಾಸಕರ ನೆರವಿನೊಂದಿಗೆ ಪರಿಹಾರ ಕಂಡುಕೊಳ್ಳುವುದು ತಂಡದ ಭೇಟಿಯ ಮುಖ್ಯ ಉದ್ದೇಶವಾಗಿದೆ. ರೈತರು ಬಳಸುವ ಕೃಷಿ ಉಪಕರಣಗಳ ಸುಧಾರಣೆ ಹಾಗೂ ಹೊಸ ಯಂತ್ರಗಳ ವಿನ್ಯಾಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಗೋಪಾಲಗೌಡ ಅವರು ಪ್ರಸ್ತಾಪಿಸಿದ ಯಂತ್ರವೊಂದರ ಅಗತ್ಯದ ಕುರಿತು ವಿನ್ಯಾಸಕರ ಗಮನಕ್ಕೆ ತಂದು, ಸಾಧ್ಯವಾದರೆ ಮಾದರಿ ಯಂತ್ರ (ಪ್ರೊಟೊಟೈಪ್) ಅಭಿವೃದ್ಧಿಪಡಿಸುವ ಚಿಂತನೆಯೂ ತಂಡಕ್ಕಿದೆ.

‘ಕೃಷಿ ಉಪಕರಣಗಳ ವಿನ್ಯಾಸಕ್ಕೆ ನಮ್ಮ ತಂಡದಲ್ಲಿ ಪ್ರತ್ಯೇಕ ವಿನ್ಯಾಸಕರಿದ್ದಾರೆ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅನುಗುಣವಾಗಿ ಹೊಸ ಯಂತ್ರಗಳನ್ನು ರೂಪಿಸಿ, ಮಾದರಿ ಸಿದ್ಧಪಡಿಸಿದರೆ ಮುಂದೆ ಇತರರು ಅದನ್ನು ಉತ್ಪಾದಿಸಬಹುದು. ಇದನ್ನು ಲಾಭದ ಉದ್ದೇಶದಿಂದ ನೋಡದೆ ಕೃಷಿಗೆ ನಮ್ಮ ಕೊಡುಗೆಯಾಗಿ ಪರಿಗಣಿಸಿದ್ದೇವೆ. ಕರ್ನಾಟಕದ ಕೃಷಿ ಪದ್ಧತಿಗಳು ಮತ್ತು ಇಲ್ಲಿನ ಜ್ಞಾನವನ್ನು ಜಗತ್ತಿನ ಇತರ ಭಾಗಗಳಿಗೂ ಪರಿಚಯಿಸುವ ಉದ್ದೇಶವಿದೆ’ ಎಂದು ತಂಡದ ಸದಸ್ಯರು ತಿಳಿಸಿದರು.

ಈ ಯೋಜನೆಯು ದೆಹಲಿಯಲ್ಲಿ ಆರಂಭಗೊಂಡಿದ್ದು, ಬಾಂಗ್ಲಾದೇಶದ ಸೆಣಬು ಕೃಷಿ, ಶ್ರೀಲಂಕಾದ ಕಡಲಕಳೆ ಕೃಷಿ ಹಾಗೂ ಮಹಾರಾಷ್ಟ್ರದ ಲೂಫಾ (ನೈಸರ್ಗಿಕ ನಾರು ನೀಡುವ ಸಸ್ಯ) ಕೃಷಿಯ ಅಧ್ಯಯನವನ್ನು ಒಳಗೊಂಡಿದೆ. ಕರ್ನಾಟಕವು ದೇಶದ ಪ್ರಮುಖ ರೇಷ್ಮೆ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವುದರಿಂದ ಇಲ್ಲಿನ ರೇಷ್ಮೆ ಬೆಳೆಗಾರರ ಸಮಸ್ಯೆ ಹಾಗೂ ರೇಷ್ಮೆ ಕೃಷಿಯ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಎಚ್.ಜಿ. ಗೋಪಾಲಗೌಡ, ‘ ಕೃಷಿಯೇ ಬದುಕಿಗೆ ಸೂಕ್ತ ಎಂಬ ಅನುಭವ ನನ್ನದು. ಕೃಷಿಯಲ್ಲಿರುವ ಲಾಭ ಬೇರೆ ಯಾವುದರಲ್ಲೂ ಇಲ್ಲ. ರೇಷ್ಮೆ ಮತ್ತು ಹೈನುಗಾರಿಕೆಯನ್ನು ಅಳವಡಿಸಿಕೊಂಡರೆ ದೊಡ್ಡ ಶ್ರೀಮಂತರಾಗದಿದ್ದರೂ ಉತ್ತಮ ಆರೋಗ್ಯ, ಉತ್ತಮ ಬಟ್ಟೆ ಮತ್ತು ಒಳ್ಳೆಯ ಊಟದೊಂದಿಗೆ ನೆಮ್ಮದಿಯ ಜೀವನ ನಡೆಸಬಹುದು. ನಾನು ಯಾರಿಂದಲೂ ಹೇಳಿಸಿಕೊಂಡು ಈ ಪದ್ಧತಿ ಅನುಸರಿಸುತ್ತಿಲ್ಲ. ಸ್ವಂತ ಅನುಭವದಿಂದ ಪ್ರಾಯೋಗಿಕವಾಗಿ ಕೃಷಿ ಮಾಡುತ್ತಿದ್ದೇನೆ. ಇದಕ್ಕಿಂತ ಹೆಚ್ಚಿನ ವೈಭೋಗ ಇನ್ನೇನು ಬೇಕು’ ಎಂದು ತಮ್ಮ ಕೃಷಿ ಅನುಭವ ಹಂಚಿಕೊಂಡರು.

ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಭಾರತಿ, ರೈತರಾದ ಬೂದಾಳ ರಾಮಾಂಜಿ, ಬೋದಗೂರು ರಾಮಮೂರ್ತಿ, ಸತೀಶ್, ಅಪ್ಪೇಗೌಡನಹಳ್ಳಿ ಮಂಜು, ಗೊರಮಡುಗು ಮಂಜು, ಕಾಚಹಳ್ಳಿ ಶೈಲಜ, ಹಿತ್ತಲಹಳ್ಳಿ ಆಶಾ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ