22.1 C
Sidlaghatta
Sunday, July 3, 2022

ಸ್ವಾತಂತ್ರ್ಯ ಹೋರಾಟಗಾರ ಮಳ್ಳೂರು ನಾಗಪ್ಪ ಅವರಿಗೆ ಜಿಲ್ಲಾಡಳಿತದಿಂದ ಗೌರವ ಸಮರ್ಪಣೆ

- Advertisement -
- Advertisement -

75 ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಆರ್.ಲತಾ ಅವರು ಶುಕ್ರವಾರ ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರನ್ನು ಅವರ ಮನೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಿ ಗೌರವ ಸಲ್ಲಿಸಿ  ಮಾತನಾಡಿದರು.

ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವೇ ಅತ್ಯಂತ ರೋಚಕ ಮತ್ತು ಪ್ರೇರಣದಾಯಕವಾಗಿದೆ. ಈ ಸಂಗ್ರಾಮದಲ್ಲಿ  ಅವಿರತ ಹೋರಾಟ ಮಾಡಿ ಸಾವಿರಾರು ದೇಶಪ್ರೇಮಿಗಳು ತಮ್ಮ ಇಡೀ ಬದುಕನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಪರಕೀಯರ ದಾಸ್ಯದ ಕಪಿಮುಷ್ಠಿಯಿಂದ ದೇಶವನ್ನು ಬಿಡುಗಡೆ ಮಾಡಲು ಹಾಗೂ ದೇಶದ ಎಲ್ಲಾ ಪ್ರಜೆಗಳು ಸ್ವತಂತ್ರವಾಗಿ ಜೀವನ ಮಾಡಲು ಲೆಕ್ಕವಿಲ್ಲದಷ್ಟು ತ್ಯಾಗ ಬಲಿದಾನಗಳು ಆಗಿ ಹೋಗಿವೆ. ಇವೆಲ್ಲವನ್ನೂ ಯುವಪೀಳಿಗೆ ಗಂಭೀರವಾಗಿ ಪರಿಗಣಿಸಿ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶದ ಋಣವನ್ನು ತೀರಿಸಬೇಕು.

ಬ್ರಿಟಿಷರ ವಿರುದ್ಧ ಹೋರಾಡಿ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತ ಮಾಡಿದ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಬಲಿದಾನಗಳ ವಿಚಾರಗಳನ್ನು ಇಂದಿನ ಯುವಪೀಳಿಗೆ ಮಾದರಿಯಾಗಿ ಸ್ವೀಕರಿಸಿ ಬಲಿಷ್ಠ ಭಾರತ ನಿರ್ಮಾಣಕ್ಕೆ ತಮ್ಮ ಶ್ರಮವನ್ನು ವಿನಿಯೋಗಿಸಬೇಕು ಎಂದು ತಿಳಿಸಿದರು.

 ಈ ಹಿಂದೆ ನಮ್ಮ ಹಿರಿಯರು ದೇಶಭಕ್ತಿಯ ಬದ್ಧತೆಯಿಂದ ಬ್ರಿಟಿಷರ ವಿರುದ್ಧ ಹೋರಾಟ ಮಾಡದೇ ಇದ್ದಿದ್ದರೆ ಇಂದಿಗೂ ಪರಕೀಯರ ಗುಲಾಮರಾಗಿಯೇ ಇರಬೇಕಾದ ಪರಿಸ್ಥಿತಿ ಇರುತ್ತಿತ್ತು. ಆದರೆ, ಅಂದಿನ ಹಿರಿಯರಲ್ಲಿ ಅನೇಕರು ಇವೆಲ್ಲವನ್ನೂ ಮನಗಂಡು ತಮ್ಮ ವೈಯಕ್ತಿಕ ಜೀವನವನ್ನು ಸಂಪೂರ್ಣವಾಗಿ ಬದಿಗಿಟ್ಟು ಹಗಲಿರುಳು ದೇಶಸೇವೆ ಮಾಡಿದ್ದಾರೆ. ಅವರು ಮಾಡಿರುವ ಮಹತ್ಕಾರ್ಯಕ್ಕೆ ಎಂದೆಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಸ್ವಾತಂತ್ರ್ಯ ಸೇನಾನಿಗಳಲ್ಲಿ ಇಂದು ಬೆರಳೆಣಿಕೆಯಷ್ಟು ಮಂದಿಯಷ್ಟೇ ನಮ್ಮ ಮಧ್ಯೆ ಇದ್ದಾರೆ. ಅವರನ್ನು ಕಾಣುವ, ಅವರೊಂದಿಗೆ ಮಾತನಾಡುವುದು ನಮ್ಮೆಲ್ಲರ ಪುಣ್ಯ ಮತ್ತು ಹೆಮ್ಮೆಯಾಗಿದೆ. ಇಂದಿನ ಯುವಪೀಳಿಗೆಗೆ ಅವರ ಅನುಭವ, ತತ್ವಾದರ್ಶಗಳ ಜೊತೆಗೆ ದೇಶಪ್ರೇಮದ ಸಂದೇಶಗಳು ಉತ್ತಮ ಭವಿಷ್ಯ ಮತ್ತು ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಪಾಠಗಳಾಗಬೇಕು. ಜಿಲ್ಲಾಡಳಿತ ಸದಾ ಸ್ವಾತಂತ್ರ್ಯ ಹೋರಾಟಗಾರರ ಹಿತಕಾಯುವಲ್ಲಿ ಬದ್ಧವಾಗಿರುತ್ತದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಳ್ಳೂರು ನಾಗಪ್ಪ, ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಪಾತ್ರ ಹೆಚ್ಚಾಗಿದೆ. ಭಕ್ತರಹಳ್ಳಿಯಲ್ಲಿ ದೇಶಪ್ರೇಮಿಗಳ ವಿರುದ್ಧ ಗೋಲಿಬಾರ್ ಆದಂತಹ ಸಂದರ್ಭದಲ್ಲಿ ಮಳ್ಳೂರು ಜಿ.ಪಾಪಣ್ಣನವರ ನಾಯಕತ್ವದಲ್ಲಿ ಹಲವರು ಬ್ರಿಟಿಷರಿಗೆ ಸೆಡ್ಡು ಹೊಡೆದರು. ಆ ಸಂದರ್ಭದಲ್ಲಿ ರೈಲು ಹಳಿಗಳನ್ನು ಕಿತ್ತೊಗೆದು ರಸ್ತೆಗಳ ಸಂಪರ್ಕಗಳನ್ನು ಕಡಿತಗೊಳಿಸಲಾಗಿತ್ತು. ಇದಕ್ಕೆ ಬ್ರಿಟಿಷರು ತುಂಬಾ ಕ್ರೌರ್ಯತನದ ಉತ್ತರ ನೀಡಿ ನಮ್ಮ ಹಲವಾರು ಸಹ ಹೋರಾಟಗಾರರನ್ನು ಜೈಲಿಗೆ ಅಟ್ಟಿದ್ದರು ಮತ್ತು ಕಾಡುಗಳಲ್ಲಿ ಬಿಟ್ಟು ಬಂದಿದ್ದರು. ಆದರೂ ಜಗ್ಗಲಿಲ್ಲ. ಭಕ್ತರಹಳ್ಳಿಯಲ್ಲಿ ಅಂದಿನ ಪೊಲೀಸರ ಬಂದೂಕಿಗೆ ಇಬ್ಬರು ಬಲಿಯಾದರು ಎಂದು ತಮ್ಮ ದಶಕಗಳ ನೆನಪಿನ ಬುತ್ತಿಯನ್ನು ಮೆಲುಕು ಹಾಕಿದರು.

 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರ ಕಾರ್ಯವೈಖರಿ ಬಗ್ಗೆ ಮಳ್ಳೂರು ನಾಗಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿಯೂ ಉತ್ತಮ ಜನಪರ ಕೆಲಸಗಳನ್ನು ಮಾಡಬೇಕೆಂದು ಹೇಳಿದರು. ನೀವು ನನ್ನ ಮೊಮ್ಮಗಳಿದ್ದಂತೆ ಎಂದು ಹಸನ್ಮುಖಿಯಾದರು. ಆತ್ಮೀಯತೆಯಿಂದ ಹಾಗೂ ಹಿರಿಯನೆಂಬ ಸಲುಗೆ ತೆಗೆದುಕೊಂಡು ಕಿವಿಮಾತು ಹೇಳುತ್ತಿದ್ದು ಅನ್ಯಥಾ ಭಾವಿಸಬಾರದೆಂದು ಹೇಳಿ, ಹಲವು ಸಕಾರಾತ್ಮಕ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು 98 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುವ ಜೊತೆಗೆ ಅವರ ಕುಶಲೋಪರಿ ವಿಚಾರಿಸಿದರು. ಸ್ವಾತಂತ್ರ್ಯ ಯೋಧರು ದೇಶದ ಮತ್ತು ಸಮಾಜದ ಅತ್ಯಮೂಲ್ಯ ಆಸ್ತಿಯಾಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಕಿರಿಯರಿಗೆ ಸಲಹೆ, ಮಾರ್ಗದರ್ಶನ ನೀಡುತ್ತಿರಬೇಕು ಎಂದು ಮನವಿ ಮಾಡಿದರು.

ಶಾಸಕ ವಿ.ಮುನಿಯಪ್ಪ, ತಹಶೀಲ್ದಾರ್ ರಾಜೀವ್, ತಾಲ್ಲೂಕು ಪಂಚಾಯಿತಿ ಚಂದ್ರಕಾಂತ್ ಹಾಗೂ ನಾಗಪ್ಪ ಅವರ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here