Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ (Government Hospital) ಆವರಣದಲ್ಲಿ ಮಂಗಳವಾರ ವಿಶ್ವ ಬೈಸಿಕಲ್ ದಿನಾಚರಣೆಯ (World Bicycle Day) ಕಾರ್ಯಕ್ರಮದಲ್ಲಿ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ (Dr. Venkateshmurthy) ಅವರು ಮಾತನಾಡಿದರು.
ಸೈಕಲ್ ಮಹತ್ವವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಸೈಕ್ಲಿಂಗ್ ಜನರು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಹೃದ್ರೋಗ, ಸ್ಟ್ರೋಕ್, ಮಧುಮೇಹ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವುದಲ್ಲದೇ ಸಂಚಾರಿ ಸಾಧನವಾಗಿ ಸಹಕಾರಿ. ವಿಶೇಷವಾಗಿ ಟೈಪ್ 1 ಮತ್ತು ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಆರೋಗ್ಯಕರ ಜೀವನಶೈಲಿ ಅಳವಡಿಕೆಗೆ ಪ್ರೇರೇಪಣೆ ನೀಡಲು ಸಹ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿನಿತ್ಯ ದಿನಕ್ಕೆ ಅರ್ಧ ಗಂಟೆಯಾದರೂ, ಬೆಳಿಗ್ಗೆ ಅಥವಾ ಸಂಜೆಯ ವೇಳೆ ಸೈಕ್ಲಿಂಗ್ ಮಾಡುವುದರಿಂದ ಉತ್ತಮ ವ್ಯಾಯಾಮವಾಗುತ್ತದೆ. ದೇಹದ ಪ್ರತಿಯೊಂದು ಭಾಗವು ಚಟುವಟಿಕೆಯಿಂದ ಆ ದಿನ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ಮನೆಯ ಹತ್ತಿರದ ಸ್ಥಳಗಳಿಗೆ ಹಾಗೆಯೇ ಸೈಕಲ್ ಸವಾರಿ ಮಾಡಿಕೊಂಡು ಹೋದರೆ ಇದಕ್ಕಿಂತ ಉತ್ತಮ ವ್ಯಾಯಾಮ ಬೇರೊಂದಿಲ್ಲ ಎಂದು ಅವರು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ಪ್ರತಿನಿತ್ಯ ಸೈಕಲ್ ಸವಾರಿಯನ್ನು ನಿಯಮಿತವಾಗಿ ರೂಢಿಸಿಕೊಂಡರೆ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದು. ಸೈಕಲ್ ಪೆಡಲ್ ತುಳಿಯುವುದರಿಂದ ರಕ್ತದ ಸಂಚಲನವು ಉತ್ತಮವಾಗುತ್ತದೆ. ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ಕರುಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಜೀರ್ಣಕ್ರಿಯೆಯು ಉತ್ತಮವಾಗುತ್ತದೆ. ಕಾಲುಗಳು ಕೂಡ ಶಕ್ತಿಯುತವಾಗುವುದಲ್ಲದೇ, ನೋವಿದ್ದರೆ ನಿವಾರಣೆಯಾಗುತ್ತದೆ. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ತೆಗೆದುಕೊಳ್ಳಲು ಸಹಕಾರಿಯಾಗಿದೆ. ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಸೈಕಲ್‌ನಲ್ಲಿ ಓಡಾಡಿ ಎಂದರು.
ಡಾ.ವಿಜಯಕುಮಾರ್, ಡಾ.ಯಶ್ವಂತ್, ಸಿಡಿಪಿಒ ಇಲಾಖೆಯ ನವತಾಜ್, ಆಸ್ಪತ್ರೆಯ ಸಿಬ್ಬಂದಿ ಅಕ್ಕಲರೆಡ್ಡಿ, ದೇವರಾಜ್, ಲೋಕೇಶ್, ವಿಜಯಮ್ಮ, ಮುನಿರತ್ನಮ್ಮ, ಗೀತಾ, ನಂದಿನಿ, ಟಿಟಿ ನರಸಿಂಹಪ್ಪ, ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಮಕ್ಕಳು ವಿಶ್ವ ಹಾಜರಿದ್ದರು.