ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ರೈತರು ಹಾಗೂ ರೀಲರುಗಳನ್ನೊಳಗೊಂಡ ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತರುವ ರೈತರು ಯಾವುದೇ ಕಾರಣಕ್ಕೂ ಲಾಭದ ಗೂಡೆಂದು ಅಥವಾ ಸ್ಯಾಂಪಲ್ ಗೂಡೆಂದು ಯಾರಿಗೂ ಕೊಡಬಾರದು. ಹಣವನ್ನೂ ಸಹ ಯಾರಿಗೂ ನೀಡಬಾರದು ಎಂದು ಅವರು ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಲಾಭದ ಗೂಡು ಅಥವಾ ಸ್ಯಾಂಪಲ್ ಹೆಸರಿನಲ್ಲಿ ರೈತರಿಂದ ಕೆಲವಾರು ಮಂದಿ ಗೂಡನ್ನು ಹೊರಕ್ಕೆ ಕೊಂಡೊಯ್ಯುತ್ತಿದ್ದರು. ಇದೀಗ ಇದು ದಳ್ಳಾಳಿಗಳನ್ನು ಬೆಳೆಸುವ ದೊಡ್ಡ ಪಿಡುಗಾಗಿದೆಯೆಂದು, ಇದನ್ನು ನಿಲ್ಲಿಸಬೇಕೆಂದು ರೀಲರುಗಳೇ ರೇಷ್ಮೆ ಕೃಷಿ ಉಪನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿರುವುದು ಸ್ವಾಗತಾರ್ಹ. ಲೈಸೆನ್ಸ್ ಇರುವ ರೀಲರುಗಳನ್ನು ಮಾತ್ರ ರೇಷ್ಮೆ ಗೂಡಿನ ಮಾರುಕಟ್ಟೆಯ ಒಳಗೆ ಬರಲು ಅವಕಾಶ ಮಾಡಿಕೊಡಬೇಕು. ಒಂದೇ ಒಂದು ರೇಷ್ಮೆ ಗೂಡನ್ನೂ ಯಾರಿಗೂ ಉಚಿತವಾಗಿ ನೀಡಬಾರದು ಎಂದು ಹೇಳಿದರು.
ರೀಲರ್ಸ್ ಸಂಘದ ಅಧ್ಯಕ್ಷ ಅನ್ಸರ್ ಮಾತನಾಡಿ, ರೇಶ್ಃಮೆ ಗೂಡಿನ ಮಾರುಕಟ್ಟೆಯಲ್ಲಿ ಕೆಲವಾರು ದಳ್ಳಾಳಿಗಳು ರೈತರಿಂದ ಲಾಭದ ಗೂಡು ಪಡೆಯುತ್ತಿದ್ದು, ಇದರಿಂದ ವಹಿವಾಟಿನಲ್ಲಿ ವ್ಯತ್ಯಾಸವಾಗುತ್ತಿದೆ. ಇದರಿಂದಾಗಿ ಹಲವಾರು ರೀಲರುಗಳಿಗೆ ಗೂಡು ಖರೀದಿಸಲು ಆಗುತ್ತಿಲ್ಲ. ಮಧ್ಯವರ್ತಿಗಳು ಹರಾಜಿನ ಸಮಯಕ್ಕಿಂತ ಮುಂಚೆಯೇ ರೈತರಿಂದ ನೇರ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ದಳ್ಳಾಳಿ ಅಥವಾ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಬೇಕು. ರೀಲರುಗಳು ರೈತರಿಂದ ಪಾರದರ್ಶಕವಾಗಿ ಗೂಡು ಖರೀದಿಸಲು ಅನುಕೂಲವಾಗುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೀಲರುಗಳಾದ ಜಿ.ರಹಮಾನ್ ಮಾರುಕಟ್ಟೆಯ ಸಮಸ್ಯೆಗಳ ಬಗ್ಗೆ ಮಾತನಾಡಿ, ಅಧಿಕಾರಿಗಳ ಬಿಗಿ ಇಲ್ಲದಿದ್ದರೆ ವ್ಯವಸ್ಥೆಯನ್ನು ಸರಿಪಡಿಸಲು ಆಗದು ಎಂದರು.
ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬೋದಗೂರು ವೆಂಕಟಸ್ವಾಮಿರೆಡ್ಡಿ, ವೇಣುಗೋಪಾಲ್, ದೇವರಾಜ್, ರಾಮಕೃಷ್ಣಪ್ಪ, ನರಸಿಂಹಮೂರ್ತಿ, ಬಸವರಾಜ್, ರೀಲರುಗಳಾದ ಅನ್ವರ್ ಸಾಬ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi