ನಿಸರ್ಗ ಇಕೋ ಕ್ಲಬ್ ಕಾರ್ಯ ಚಟುವಟಿಕೆಗಳ ಅಡಿಯಲ್ಲಿ ನಿಸರ್ಗ ನಡಿಗೆ ಕಾರ್ಯಕ್ರಮದ ಅಂಗವಾಗಿ ಶಿಡ್ಲಘತ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳನ್ನು ಮಂಗಳವಾರ ಊರಿನ ಸಮೀಪದ ಚಿಕ್ಕ ಅರಣ್ಯಕ್ಕೆ ಕರೆದೊಯ್ದ ಶಿಕ್ಷಕರು ನೈಸರ್ಗಿಕ ಪಾಠದ ಮೂಲಕ ಮಕ್ಕಳಿಗೆ ಪ್ರಕೃತಿಯ ಪರಿಚಯವನ್ನು ಮಾಡಿಕೊಟ್ಟರು.
“ಹತ್ತು ತಂಡಗಳಲ್ಲಿ ಮಕ್ಕಳನ್ನು ಹಂಚಿಕೆ ಮಾಡಿ, ಹಂಚಿಕೆಯಾದ ಮಕ್ಕಳು ತಮ್ಮ ನಾಯಕರ ಜೊತೆ ಶಿಕ್ಷಕರ ಮಾರ್ಗದರ್ಶನ ಪಡೆದು ಜೀವ ಪ್ರಭೇದಗಳ ಸ್ಥಳೀಯ ಹೆಸರು, ಹೇರಳ, ವಿರಳ, ಸೇರ್ಪಡೆ ಹೀಗೆ ಹಲವು ಬಗೆಯ ಅಂಶಗಳಿಗೆ ಉತ್ತರಗಳನ್ನು ದಾಖಲಿಸಿದರು. ಮರದ ಗಣಿತಾತ್ಮಕ ಅಧ್ಯಯನದಡಿಯಲ್ಲಿ ಮರದ ಎತ್ತರ, ಕಾಂಡದ ಸುತ್ತಳತೆ, ಹರಿವಿನ ವಿಸ್ತೀರ್ಣ, ನೆರಳಿನ ವಿಸ್ತೀರ್ಣ, ಮರದಿಂದ ದೊರೆಯುವ ಉರುವಲು, ಜೈವಿಕ ರಾಶಿ ಅಥವಾ ಎಲೆ ಗೊಬ್ಬರ, ಮರದ ಅಂದಾಜು ಬೆಲೆಯನ್ನು ಬರೆದಿಟ್ಟರು.
ಮರದ ಜೈವಿಕ ಅಧ್ಯಯನಕ್ಕೆ ಸಂಭಂದಿಸಿದಂತೆ ಮರದ ಬುಡ, ಕಾಂಡ, ಮತ್ತು ಮೇಲಿರುವ ಪ್ರಾಣಿ, ಪಕ್ಷಿ, ಕೀಟ, ಮತ್ತು ಸೂಕ್ಷ್ಮ ಜೀವಿಗಳ ಬಗ್ಗೆ ಹಾಗೂ ಮರದ ಸ್ಥಳೀಯ ಹೆಸರು, ವೈಜ್ಞಾನಿಕ ಹೆಸರು, ಮರದ ಸಹಿ ಅಥವಾ ಕಾಂಡದ ಕಲ್ಲಚ್ಚಿನ ಪ್ರತಿಯನ್ನು ಪ್ರಾತ್ಯಕ್ಷಿಕವಾಗಿ ದಾಖಲಿಸಿದರು. ಎಲ್ಲಾ ಮಕ್ಕಳು ಕ್ರಿಯಾತ್ಮಕವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ವ್ಯಕ್ತ ಪಡಿಸಿದರು. ಶಾಲೆಯ ಒಳಗಿನ ಪಾಠಕ್ಕಿಂತಲೂ ಪರಿಸರದ ಪಾಠ ಯಶಸ್ವಿಯಾಗುತ್ತದೆ” ಎಂದು ಮಕ್ಕಳಿಗೆ ಮಾರ್ಗದರ್ಶಕರಾಗಿದ್ದ ಮುಖ್ಯ ಶಿಕ್ಷಕ ಎಂ.ದೇವರಾಜ ಮತ್ತು ಸಹ ಶಿಕ್ಷಕರಾದ ಎಚ್.ಬಿ.ಕೃಪಾ, ವಿ.ಎಂ.ಮಂಜುನಾಥ, ಪಿ.ಸುದರ್ಶನ ತಿಳಿಸಿದರು.