ಶಿಡ್ಲಘಟ್ಟ ನಗರದ ಆಗ್ನೇಯ ದಿಕ್ಕಿನಲ್ಲಿರುವ ಗೌಡನಕೆರೆ ಬಳಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ರಚಿಸಿರುವ ಗೌಡನಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ರೈತರು, ಗೌಡನಕೆರೆ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ವಿವಿಧ ಇಲಾಖೆಗಳ ವಿರುದ್ದ ಘೋಷಣೆಗಳನ್ನು ಕೂಗಿದರು.
ಇತಿಹಾಸ ಪ್ರಸಿದ್ದ ಗೌಡನಕೆರೆ ಸುತ್ತಮುತ್ತಲಿನ ಎಂಟು ಹಳ್ಳಿಗಳಿಗೆ ಈ ಹಿಂದೆ ನೀರುಣಿಸುವ ಜೀವನಾಡಿಯಾಗಿತ್ತು. ಸದರಿ ಕೆರೆಯ ಅಚ್ಚಕಟ್ಟು ಪ್ರದೇಶದ ಸಾವಿರಾರು ರೈತ ಕುಟುಂಬಗಳು ಕೆರೆಯ ನೀರನ್ನು ನಂಬಿ ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಅಲ್ಲದೇ ನಗರ ಸೇರಿದಂತೆ ವಿವಿಧ ಗ್ರಾಮಗಳಿಗೆ ನೀರು ಪೂರೈಸಲು ಕೊಳವೆಬಾವಿಗಳನ್ನು ಸಹ ಕೊರೆಸಲಾಗಿದೆ. ಸಮರ್ಪಕ ನಿರ್ವಹಣೆಯಿಲ್ಲದೆ ಕೆರೆ ಬತ್ತಿಹೋಗುವ ಜೊತೆಗೆ ಕೆರೆಯಲ್ಲಿ ಹಾಕಿರುವ ಬಹುತೇಕ ಕೊಳವೆಬಾವಿಗಳು ಸಹ ಬತ್ತಿಹೋಗಿವೆ. ಸದರಿ ಕೆರೆಯಲ್ಲಿ ಜಾಲಿ ಮರಗಳು ಸೇರಿದಂತೆ ಗಿಡಗಂಟೆಗಳು ಬೆಳೆದುಕೊಂಡಿದ್ದು ಕೆರೆಯು ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಕಳೆದುಕೊಂಡಿದೆ.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡನಕೆರೆಯಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳನ್ನು ತೆಗೆಸುವಂತೆ ಪಂಚಾಯಿತಿಯಲ್ಲಿ ವಿಚಾರಿಸದರೆ ಇದು ಕಿರು ನೀರಾವರಿ ಇಲಾಖೆಗೆ ಸೇರಿದ ಕೆರೆ ಎಂದು ಅಲ್ಲಿ ವಿಚಾರಿಸಿದರೆ ಇದು ಈಗಾಗಲೇ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ ಎಂಬ ಉತ್ತರ ಕೇಳಿ ಆತಂಕವನ್ನುಂಟು ಮಾಡಿದೆ.
ಸದರಿ ಕೆರೆಯನ್ನು ಅನ್ಯ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ ಸ್ಥಳೀಯ ಪಂಚಾಯಿತಿ ಮತ್ತು ಅಚ್ಚುಕಟ್ಟು ಪ್ರದೇಶದ ಯಾವುದೇ ರೈತರ ಗಮನಕ್ಕೆ ತಾರದೇ, ಗ್ರಾಮಸಭೆಯಲ್ಲಿ ಚರ್ಚಿಸದೇ ಕೆರೆಯನ್ನು ಅರಣ್ಯ ಇಲಾಖೆಗೆ ನೀಡಿರುವುದು ಸಂವಿಧಾನ ಬಾಹಿರವಾಗಿದೆ. ಸಮುದಾಯದ ಆಸ್ತಿಯನ್ನು ನಿರ್ವಹಿಸುವಲ್ಲಿ ನಿರ್ಲಕ್ಷö್ಯ ತೋರುವ ಜೊತೆಗೆ ಕೆರೆ ವ್ಯಾಪ್ತಿಯಲ್ಲಿ ಜಾಲಿ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಇಲಾಖೆ ಲೋಪವೆಸಗಿದೆ.
ಸರ್ಕಾರ ಕೆರೆಗಳಿಗೆ ನೀರು ತುಂಬಿಸಲು ರೂಪಿಸಲಾಗಿರುವ ಎಚ್ ಎನ್ ವ್ಯಾಲಿ ಯೋಜನೆಯ ಸಂಸ್ಕರಿಸಿದ ನೀರಾದರೂ ಗೌಡನಕೆರೆಗೆ ಬಂದರೆ ಅಚ್ಚುಕಟ್ಟು ಪ್ರದೇಶದ ಕೊಳವೆಬಾವಿಗಳು ಮರುಪೂರಣವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಕೆರೆಯು ಜಾಲಿ ಮರಗಳಿಂದ ತುಂಬಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿರುವುದು ರೈತರಿಗೆ ನಿರಾಸೆಯನ್ನುಂಟು ಮಾಡಿದೆ.
ಕೂಡಲೇ ಗೌಡನಕೆರೆಯಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳನ್ನು ತೆಗೆಯುವುದು ಸೇರಿದಂತೆ ಒತ್ತುವರಿ ತೆರವುಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುವ ಜೊತೆಗೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿ ಉಪ ವಿಭಾಗಾಧಿಕಾರಿ ರಘುನಂದನ್ ರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ರಘುನಂದನ್ ಮಾತನಾಡಿ ಮುಂದಿನ ಒಂದು ತಿಂಗಳೊಳಗೆ ಕೆರೆಯಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳನ್ನು ತೆಗೆಯುವ ಜೊತೆಗೆ ಕೆರೆ ಒತ್ತುವರಿ ಮಾಡಿರುವವವರನ್ನು ತೆರವುಗೊಳಿಸಲಾಗುವುದು. ಇದರ ಜೊತೆಗೆ ಜಿಲ್ಲೆಯಾಧ್ಯಂತ ನೀಲಗಿರಿ ತೆರವುಗೊಳಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಗೌಡನಕೆರೆ ಸಂರಕ್ಷಣಾ ಸಮಿತಿಯ ಆನೂರು ದೇವರಾಜ್, ರೈತ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್, ಎಸ್.ಎಂ.ರವಿಪ್ರಕಾಶ್, ಜೆ.ವಿ.ವೆಂಕಟಸ್ವಾಮಿ, ಪ್ರತೀಶ್, ಬೆಳ್ಳೂಟಿ ಮುನಿಕೆಂಪಣ್ಣ, ವೇಣು, ಬಿ.ನಾರಾಯಣಸ್ವಾಮಿ, ಮಳ್ಳೂರು ಹರಿಶ್, ಮತ್ತಿತರರು ಹಾಜರಿದ್ದರು
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi