Nadipinayakanahalli, sidlaghatta : “ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿ ದೊಡ್ಡದು ಎಂದು ಭಾವಿಸಿದರೆ ದೇಶದಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಶಿಸ್ತು ಮತ್ತು ಸಾರ್ವಜನಿಕ ಮೌಲ್ಯಗಳನ್ನು ಗೌರವಿಸುವುದೇ ಪ್ರಗತಿಯ ಹಾದಿ,” ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆ, ಕಪಿಲಮ್ಮ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವದ 90ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಯಶಸ್ಸಿನ ರಹಸ್ಯ ಅಲ್ಲಿನ ಜನರ ‘ಸಾಮಾಜಿಕ ಶಿಸ್ತು’ ಎಂದು ಬಣ್ಣಿಸಿದರು.
ಯಶಸ್ಸಿಗೆ ನೆರವಾದ ಶಿಕ್ಷಕರ ಮಾತು: ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಘಟನೆಯನ್ನು ನೆನಪಿಸಿಕೊಂಡ ಮೂರ್ತಿಯವರು, “ಮೈಸೂರಿನ ಶಾರದಾ ವಿಲಾಸ್ ಶಾಲೆಯಲ್ಲಿ ನಾನು ಓದುವಾಗ ಕೆ.ವಿ. ನಾರಾಯಣ್ ಎಂಬ ಶಿಕ್ಷಕರು ಒಂದು ಮಾತು ಹೇಳಿದ್ದರು—’ನಮ್ಮ ವೈಯಕ್ತಿಕ ಆಸ್ತಿಗಿಂತ ಸಮುದಾಯದ ಆಸ್ತಿಯನ್ನು ಹೆಚ್ಚು ಜಾಗರೂಕತೆಯಿಂದ ನಿರ್ವಹಿಸಬೇಕು’. ಈ ಮೌಲ್ಯವೇ ನಾನು ಇನ್ಫೋಸಿಸ್ ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಲು ಅಡಿಪಾಯವಾಯಿತು,” ಎಂದು ತಿಳಿಸಿದರು.
ಪರೀಕ್ಷೆ ಮತ್ತು ಶಿಕ್ಷಣ ವ್ಯವಸ್ಥೆ: ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಸರಿಯಾದ ವೇಳಾಪಟ್ಟಿ ಮತ್ತು ನಿರಂತರ ತಯಾರಿ ಅಗತ್ಯ ಎಂದರು. ಭಾರತೀಯ ಮತ್ತು ವಿದೇಶಿ ಶಿಕ್ಷಣ ವ್ಯವಸ್ಥೆಯ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸುತ್ತಾ, “ನಮ್ಮಲ್ಲಿ ಪರೀಕ್ಷೆಯಲ್ಲಿ ಅಂಕ ಪಡೆಯಲು ಮಾತ್ರ ಕಲಿಸಲಾಗುತ್ತಿದೆ. ಆದರೆ, ಪ್ರಶ್ನಿಸುವ ಮತ್ತು ಪ್ರಾಯೋಗಿಕವಾಗಿ ಚಿಂತಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ದೊಡ್ಡ ಸಂಶೋಧನೆಗಳು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.








