J Venkatapura, Sidlaghatta : ಹೈದರಾಬಾದ್ ನ ಇಸ್ರೋ ರಾಷ್ಟ್ರೀಯ ದೂರ ಸಂವೇದಿ ಕೇಂದ್ರದಲ್ಲಿ ಕಳೆದ ವಾರ ಇಸ್ರೋ- ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಮತ್ತು ಎಫ್.ಇ.ಎಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ “ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಭೂಗೋಳದ ಪರಿಹಾರಗಳು”(ಜಿಯೋ ಸ್ಪೇಶಿಯಲ್ ಸೊಲ್ಯೂಷನ್ಸ್ ಫಾರ್ ಗ್ರಾಮ ಪಂಚಾಯತ್ ಡೆವಲಪ್ಮೆಂಟ್)- ರಾಷ್ಟ್ರ ಮಟ್ಟದ ಎರಡು ದಿನಗಳ ಕಾರ್ಯಾಗಾರದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರದ ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ ಅಂಬರೀಷ್ ಭಾಗವಹಿಸಿದ್ದರು. ರಾಜ್ಯದಿಂದ ಈ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಏಕೈಕ ಗ್ರಾಮ ಪಂಚಾಯಿತಿ ಸದಸ್ಯೆ ಇವರು ಎಂಬುದು ವಿಶೇಷ.
“ಇಂದಿನ ತಾಂತ್ರಿಕ ಯುಗದಲ್ಲಿ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ತಾಂತ್ರಿಕತೆ ಬಳಸಿಕೊಂಡು ಯೋಜನೆ ತಯಾರಿಸುವುದು ಮತ್ತು ಅನುಷ್ಟಾನ ಮಾಡುವುದು ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಈ ಕುರಿತು ನಾಲ್ಕು ದಿನಗಳ ಕಾಲ ತರಬೇತಿಯನ್ನು ನೀಡಿದರು. ನಾವುಗಳು ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ತಾಂತ್ರಿಕ ಜ್ಞಾನ ಬಹಳ ಅವಶ್ಯಕ. ಜಿಪಿಎಸ್ ಟ್ಯಾಗಿಂಗ್, ಮಣ್ಣು, ನೀರು, ಬೆಳೆಗಳ ಮ್ಯಾಪಿಂಗ್ ಮುಂತಾದ ತಂತ್ರಜ್ಞಾನವನ್ನು ಒದಗಿಸುವ ಇಸ್ರೋ ಸಂಸ್ಥೆಯವರು ನಮಗೆ ಅರ್ಥವಾಗುವ ಹಾಗೆ ಸರಳವಾಗಿ ವಿವರಿಸಿದರು” ಎಂದು ಶಶಿಕಲಾ ಅಂಬರೀಷ್ ತಿಳಿಸಿದರು.
“ಪ್ರಮುಖವಾಗಿ ಕೃಷಿ ಮತ್ತು ಜಲಮೂಲಗಳಿಗೆ ಸಂಬಂಧಪಟ್ಟಂತೆ ಸಹಾಯವಾಗುವ ತಾಂತ್ರಿಕ ಅಂಶಗಳ ಕುರಿತು ಹೆಚ್ಚು ವಿಷಯವನ್ನು ತಿಳಿಯಪಡಿಸಿದರು. ಪ್ರಾಕೃತಿಕ ವಿಕೋಪಗಳಿಂದ ಆಗಬಹುದಾದ ತೊಂದರೆಗಳನ್ನು ತಪ್ಪಿಸಿಕೊಳ್ಳಲು ದೊರೆಯಬಹುದಾದ ಮಾಹಿತಿಗಳನ್ನು ಪಡೆದುಕೊಳ್ಳಲು ಸಹಾಯವಾಗುವ ಆಪ್ ಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು ತುಂಬಾ ಸಹಾಯವಾಗಿದೆ” ಎಂದು ಅವರು ಹೇಳಿದರು.
ಇಂತಹ ಮಹತ್ತರವಾದ ರಾಷ್ಟ್ರೀಯ ಕಾರ್ಯಾಗಾರಕ್ಕೆ ದೇಶದ ಬೇರೆ ರಾಜ್ಯಗಳಿಂದ ಆಯ್ಕೆಯಾದ ಸದಸ್ಯರು ಭಾಗವಹಿಸಿದ್ದರು. ನಮ್ಮ ರಾಜ್ಯದಿಂದ ಎಫ್.ಇ.ಎಸ್ ಸಂಸ್ಥೆಯ ಸಹಾಯದೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನ ಜೆ. ವೆಂಕಟಾಪುರ ಗ್ರಾಮ ಪಂಚಾಯಿತಿಯಿಂದ ಶಶಿಕಲಾ ಅಂಬರೀಷ್, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಸಂಪನ್ಮೂಲ ವ್ಯಕ್ತಿ ನಳಿನಾ ಹಾಗೂ ಎಫ್.ಇ.ಎಸ್ ಸಂಸ್ಥೆಯ ಕ್ಷೇತ್ರ ಸಂಯೋಜಕ ಮುನಿರಾಜು ಭಾಗವಹಿಸಿದ್ದರು.