Jangamakote, Sidlaghatta : ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಗೆ (KIADB) ಜಮೀನು ನೀಡಲು ಸಿದ್ಧರಿರುವ ರೈತರನ್ನು ಬೆದರಿಸುವ ಮತ್ತು ಅವರಲ್ಲಿ ಆತಂಕ ಸೃಷ್ಟಿಸುವ ಕೆಲಸವಾಗುತ್ತಿದ್ದು, ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನುಗಳ ರೈತರ ಪರ ಹೋರಾಟ ಸಮಿತಿಯ ಮುಖಂಡರು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಸಿಪಿಐ ಆನಂದ್ ಕುಮಾರ್ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಅನೇಕ ರೈತರು ಸ್ವಯಂ ಪ್ರೇರಿತರಾಗಿ ಕೆಐಎಡಿಬಿಗೆ ಜಮೀನು ಮಾರಾಟ ಮಾಡಲು ಸಿದ್ಧರಿದ್ದಾರೆ. ಆದರೆ, ಜಮೀನು ನೀಡಲು ವಿರೋಧಿಸುತ್ತಿರುವ ಕೆಲವರು, ಜಮೀನು ನೀಡಲು ಮುಂದಾಗಿರುವ ರೈತರಿಗೆ ಧಮಕಿ ಹಾಕುವ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ. ಕೇವಲ ರೈತರಿಗೆ ಬೆದರಿಕೆ ಹಾಕುವುದು ಮಾತ್ರವಲ್ಲದೆ, ಜಮೀನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ರೈತರನ್ನು ಗಲಾಟೆ ಮತ್ತು ಘರ್ಷಣೆಗೆ ಎತ್ತಿಕಟ್ಟುವ ಸಂಚು ನಡೆಯುತ್ತಿದೆ. ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿರುವವರ ವಿರುದ್ಧ ರೌಡಿಶೀಟ್ ತೆರೆಯಬೇಕು ಎಂದು ಸಮಿತಿ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಮುಖಂಡರಾದ ಬಸವಾಪಟ್ಟಣ ಆಂಜಿನಪ್ಪ, ತಿಪ್ಪೇಗೌಡ, ಪ್ರಭುಗೌಡ, ನಾಗರಾಜ್, ಸುಬ್ರಮಣಿ ಸೇರಿದಂತೆ ಅನೇಕರು ಹಾಜರಿದ್ದರು.








