Jangamakote, Sidlaghatta : ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಗುರುವಾರ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲೆ ಶಾಲೆಯ ಸುಭಾಷ್ ಚಂದ್ರ ಬೋಸ್ ಸ್ಕೌಟ್ಸ್ ಘಟಕ ಮತ್ತು ರಾಣಿ ಚೆನ್ನಮ್ಮ ಗೈಡ್ಸ್ ಘಟಕಗಳ ವತಿಯಿಂದ ಮತದಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ. ಎಚ್. ಪ್ರಸನ್ನಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ ಸಹ ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು ಇದರಿಂದ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಮತ್ತು ಅಕ್ಕಪಕ್ಕದ ಮನೆಗಳಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಶಾಲೆಯ ಶಿಕ್ಷಕ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸಿ. ಬಿ. ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಮತದಾರರಲ್ಲದಿದ್ದರೂ ಸಹ ಭವ್ಯ ಭಾರತದ ಭವಿಷ್ಯದ ಪ್ರಜೆಗಳಾಗಿರುವುದರಿಂದ ಎಲ್ಲರೂ ಮತದಾನದ ಮಹತ್ವವನ್ನು ಅರಿತು ತಮ್ಮ ಸಮುದಾಯ ಮತ್ತು ಗ್ರಾಮಗಳಲ್ಲಿ ಜನರಿಗೆ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.
ಊರಿನ ಪ್ರಮುಖ ಬೀದಿಗಳಲ್ಲಿ ಜಾಥ ಮೂಲಕ ಜನಜಾಗೃತಿ ಮೂಡಿಸಲಾಯಿತು. ಜಂಗಮಕೋಟೆ ಪಂಚಾಯಿತಿಯ ಕಾರ್ಯದರ್ಶಿ ರಾಧಾಕೃಷ್ಣ, ಶಾಲೆಯ ಶಿಕ್ಷಕರಾದ ಡಿ.ನಾಗರತ್ನ, ಜಿ.ಎನ್.ಲತಾ, ಮೇಘ ಜೋಷಿ, ಸುಷ್ಮಾ, ವೆಂಕಟರತ್ನಮ್ಮ, ಸಿಬ್ಬಂದಿ ಲೋಕೇಶ್ ನಾಗವೇಣಿ ಹಾಜರಿದ್ದರು.