ನಗರದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ನಾಡಿಗೆ ಕೆಂಪೇಗೌಡರು ಕೊಟ್ಟಿರುವ ಕೊಡುಗೆ ಮತ್ತು ಸಂದೇಶವನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳುವುದರ ಜೊತೆಗೆ ಅವರ ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಂಡು ಉತ್ತಮ ಸಮಾಜ, ನಿರ್ಮಾಣ ಮಾಡುವ ಕಡೆಗೆ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು. ಅವರು ಕೇವಲ ಒಂದು ಜಾತಿ ಸಮುದಾಯಕ್ಕೆ ಸೀಮಿತವಾದ ನಾಯಕರಾಗಿರಲಿಲ್ಲ, ಸರ್ವಜನಾಂಗದ ಏಳಿಗೆಗಾಗಿ ದುಡಿದವರಾಗಿದ್ದಾರೆ.
ದೂರದೃಷ್ಟಿಯ ನಾಯಕರಾಗಿ, ತ್ಯಾಗಮೂರ್ತಿಯಾಗಿ ಹಲವಾರು ಜನಹಿತ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರು ನಗರದಲ್ಲಿ ಗಂಗಾಧರೇಶ್ವರ ದೇವಾಲಯ, ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಕೆಂಪಾಬುದಿ ಕೆರೆ ನಿರ್ಮಾಣ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರು ಸ್ವಾಭಿಮಾನದ ಸಂಕೇತವಾಗಿದ್ದು, ಇವರು ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯಕ್ಕೂ ಮಮಾದರಿಯಾಗಿದ್ದಾರೆ.ಅವರ ಜನಪರ ಕಾರ್ಯಗಳಾದ ಕೆರೆಕಟ್ಟೆಗಳ ನಿರ್ಮಾಣದ ಜೊತೆಗೆ ಧಾರ್ಮಿಕತೆಯ ಕಂಪನ್ನು ಎಲ್ಲೆಡೆ ಪಸರಿಸಿ ಜನಹಿತಕ್ಕಾಗಿ ಮೂಲಭೂತ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಿದ್ದರು ಎಂದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಕೊಡುಗೆ ನಾಡಿಗೆ ಅಪಾರವಾಗಿದ್ದು, ಜನಪರ ಆಡಳಿತ ನಡೆಸುವುದು ಹೇಗೆ ಎಂದು ಅಂದಿನ ಕಾಲದಲ್ಲಿಯೇ ಅವರು ತಿಳಿಸಿಕೊಟ್ಟಿದ್ದಾರೆ. 16ನೇ ಶತಮಾನದಲ್ಲಿಯೇ ದೂರದೃಷ್ಟಿ ನಾಯಕರಾಗಿ ನಗರ ಎಂದರೆ ಹೇಗಿರಬೇಕು, ಕೆರೆಕಟ್ಟೆಗಳ ನಿರ್ಮಾಣದಿಂದ ಮನುಷ್ಯನಿಗಾಗುವ ಉಪಯೋಗವೇನು ಎಂದು ತಿಳಿಸಿಕೊಟ್ಟಿದ್ದಾರೆ. ಕೆಂಪೇಗೌಡರ ದೂರದೃಷ್ಟಿ ನಮ್ಮೆಲ್ಲರೂ ಮಾರ್ಗದರ್ಶನವಾಗಿದೆ. ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಅರಿತು ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಮುಂದುವರೆಯಬೇಕು ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಇಂದು ವಿರಾಟ್ ಸ್ವರೂಪದಲ್ಲಿ ಬೆಳೆದು ಅವರು ಕಂಡ ಕನಸುಗಳನ್ನು ನನಸಾಗಿಸಿ ವಿಶ್ವಮಾನ್ಯತೆ ಪಡೆದಿದೆ. ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಒಂದನೇ ಕೆಂಪೇಗೌಡರ ವಿವೇಚನೆ ಮತ್ತ್ತ್ತು ದೂರದೃಷ್ಟಿಯೇ ಕಾರಣ. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537 ರಲ್ಲೇ ನಗರವನ್ನು ಕಟ್ಟಿದರು. ತದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬುದು ಕೆಂಪೇಗೌಡರ ಮಹದಾಸೆಯಾಗಿತ್ತು. ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾಕುಲ ಕುಸಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು ಎಂದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ಹೆಣ್ಣಿನ ಬಗ್ಗೆ ಅಪಾರ ಗೌರವ ಕೆಂಪೇಗೌಡರಲ್ಲಿತ್ತು. ಅವರ ಆಡಳಿತದಲ್ಲಿ ಹೆಣ್ಣಿನ ಶೋಷಣೆ, ದೌರ್ಜನ್ಯಕ್ಕೆ ಅವಕಾಶವಿರಲಿಲ್ಲ. ಸ್ತ್ರೀಯನ್ನು ದೇವತೆ ಎಂದು ಗೌರವಿಸುತ್ತಿದ್ದರು. ಅಲ್ಲದೆ ಸಾವಿರಾರು ಗಿಡ ಮರಗಳನ್ನು ಕೆಂಪೇಗೌಡರು ನೆಡಿಸಿ ವೃಕ್ಷ ಪ್ರೇಮಿಯಾಗಿದ್ದರು. ಕೆಂಪೇಗೌಡರ ವಿಚಾರಧಾರೆಯನ್ನು ಅರಿಯುವುದು ಪುಣ್ಯದ ಕೆಲಸವಾಗಿದೆ ಎಂದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi
Related