ತಾಲ್ಲೂಕಿನ ಕೊತ್ತನೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆ ಮಿತಿಮೀರಿದ್ದು, ಗುರುವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದರು.
ಬೇಸಿಗೆಯ ಉರಿ ಬಿಸಿಲಿನ ತಾಪ ಏರುತ್ತಿದ್ದಂತೆಯೇ ತಾಲ್ಲೂಕಿನ ಹಲವೆಡೆ ನೀರಿನ ಸಮಸ್ಯೆ ತಲೆದೋರುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀರಿನ ತೊಂದರೆಯನ್ನು ಮುಂದಾಲೋಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತಲೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಳೆದ ಹಲವಾರು ದಿನಗಳಿಂದ ನೀರಿಲ್ಲದೆ ಪರಿತಪಿಸುತ್ತಿದ್ದೇವೆ. ಹತ್ತು ಹದಿನೈದು ದಿನಗಳಾದರೂ ಕುಡಿಯುವ ನೀರನ್ನು ಪೂರೈಕೆ ಮಾಡಲು ಗ್ರಾಮ ಪಂಚಾಯಿತಿಯವರು ವಿಫಲರಾಗಿದ್ದಾರೆ. ಪಿಡಿಒ ಮತ್ತು ಅಧ್ಯಕ್ಷರಿಗೆ ಈ ಹಿಂದೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ನೀರಿನ ಸಮಸ್ಯೆ ಬಗೆಹರಿಸಲಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದ ಕೊತ್ತನೂರು ಗ್ರಾಮದ ಪಂಚಾಕ್ಷರಿರೆಡ್ಡಿ ಅವರು ಮಾತನಾಡಿ, ತಮ್ಮ ಕೊಳವೆ ಬಾವಿಯಲ್ಲಿ ಗ್ರಾಮ ಪಂಚಾಯಿತಿಯವರು ಮೊಟರ್ ಪಂಪ್ ಅಳವಡಿಸಿಕೊಂಡು ಅದರ ನೀರನ್ನು ಗ್ರಾಮದ ಜನರ ಅನುಕೂಲಕ್ಕಾಗಿ ಉಚಿತವಾಗಿ ಬಳಸಿಕೊಳ್ಳಿ ಎಂದು ಎರಡು ಮೂರು ವಾರಗಳಿಂದ ಹೇಳುತ್ತಿರುವೆ. ಆದರೂ ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿ, ಗ್ರಾಮದ ಪಂಚಾಕ್ಷರಿರೆಡ್ಡಿ ಅವರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೊಟರ್ ಪಂಪ್ ಅಳವಡಿಸಿ ಎರಡು ದಿನಗಳೊಳಗೆ ಕೊತ್ತನೂರು ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುನಿರತ್ನಮ್ಮ ಆಂಜಿನಪ್ಪ, ಸದಸ್ಯರಾದ ಸ್ವರೂಪರೆಡ್ಡಿ, ಪಾರ್ವತಮ್ಮ, ಗ್ರಾಮದ ಜ್ಞಾನೇಶ್, ಶೈಲಮ್ಮ, ಅಶ್ವತ್ಥಮ್ಮ, ಲಕ್ಷ್ಮಮ್ಮ, ಗೌರಮ್ಮ, ಶಿಲ್ಪ, ಮಂಜುಳಾ, ಆಂಜಿನಪ್ಪ, ವೀರಭದ್ರಾಚಾರಿ, ಬಾಬು, ನಾಗಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.