ಕನ್ನಡ ನಾಡ ಧ್ವಜ ಸುಟ್ಟುಹಾಕಿರುವುದು ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ವಿರೂಪಗೊಳಿಸಿರುವ ಮಹರಾಷ್ಟ್ರದ ಎಂಇಎಸ್ ಸಂಘಟನೆಯ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟ ನಗರದ ಬಸ್ ನಿಲ್ದಾಣದ ಬಳಿ ಭಾನುವಾರ ರಸ್ತೆ ನಡೆಸಿದ ಪ್ರತಿಭಟನಾಕಾರರು ಪದೇ ಪದೇ ಕನ್ನಡ ನಾಡಧ್ವಜಕ್ಕೆ ಅವಮಾನ ಮಾಡುವುದು ಸೇರಿದಂತೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಎಂಇಎಸ್ ಸಂಘಟನೆಯ ದಬ್ಬಾಳಿಕೆಯನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಇಂತಹ ನೀಚ ಕೃತ್ಯಗಳನ್ನು ಮಾಡುತ್ತಿರುವುದು ಇದೇ ಮೊದಲೇನಲ್ಲ, ಇಂತಹ ಕಿಡಿಗೇಡಿಗಳನ್ನು ಹತ್ತಿಕ್ಕಬೇಕಾದ ಸರ್ಕಾರ, ಜನಪ್ರತಿನಿಧಗಳು ಮೀನ ಮೇಷ ಎಣಿಸುತ್ತಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಕೂಡಲೇ ಎಂಇಎಸ್ ಸಂಘಟನೆಯನ್ನು ರದ್ದುಗೊಳಿಸುವ ಜೊತೆಗೆ ನಾಡಧ್ವಜ ಹಾಗೂ ರಾಯರ ಪ್ರತಿಮೆ ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ದೇಶದಿಂದಲೇ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ರೈತ ಮುಖಂಡರಾದ ದೇವರಾಜ್, ಕೃಷ್ಣಪ್ಪ, ರಾಮಾಂಜಿ ಹಾಜರಿದ್ದರು.