Mallur, Sidlaghatta : ವಿದ್ಯುತ್ ಟ್ರಾನ್ಸ್ ಫಾರ್ಮರ್ ನ ಅರ್ಥಿಂಗ್ ವೈರ್ ತಗುಲಿ ಹಸುವೊಂದು ಮೃತ ಪಟ್ಟಿರುವ ಘಟನೆ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಳ್ಳೂರು ಗ್ರಾಮದ ಗೌರಮ್ಮ ಎಂಬುವವರಿಗೆ ಸೇರಿದ ಹಸುವನ್ನು ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ಸಮೀಪದಲ್ಲೆ ಬಿದ್ದಿದ್ದ ವಿದ್ಯುತ್ ಟ್ರಾನ್ಸ್ ಫರ್ಮರ್ ನ ಅರ್ಥಿಂಗ್ ತಂತಿಯ ಮೂಲಕ ವಿದ್ಯುತ್ ಹರಿದ ಪರಿಣಾಮ, ಹಸು ಸ್ಥಳದಲ್ಲೆ ಸಾವನ್ನಪ್ಪಿದೆ. ಅದೃಷ್ಟ ವಶಾತ್ ಹಸು ಕರೆದುಕೊಂಡು ಹೋಗುತ್ತಿದ್ದ ಗೌರಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರ ಆಕ್ರೋಶ :
ವಿದ್ಯುತ್ ಟ್ರಾನ್ಸ್ ಫರ್ಮರ್ ನ ಸಮೀಪದ ಅರ್ಥಿಂಗ್ ತಂತಿಗಳು, ನೆಲದಲ್ಲಿ ಬಿದ್ದಿರುವ ಬಗ್ಗೆ ಹಲವಾರು ಬಾರಿ ಬೆಸ್ಕಾಂ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದರೂ ಸಹಾ ಅವರು ಸರಿಪಡಿಸದೇ ನಿರ್ಲಕ್ಷ್ಯ ವಹಿಸಿರುವ ಕಾರಣ, ಬಡ ಕುಟುಂಬಕ್ಕೆ ಆಸರೆಯಾಗಿದ್ದ ಹಸು ಪ್ರಾಣ ಕಳೆದುಕೊಳ್ಳುವಂತಾಗಿದೆ. ಈ ರಸ್ತೆಯಲ್ಲೆ ಸಾರ್ವಜನಿಕರು, ಶಾಲಾ ಮಕ್ಕಳು ಓಡಾಡುತ್ತಿರುತ್ತಾರೆ. ಆಕಸ್ಮಾತ್ ಮಕ್ಕಳು ತಂತಿಯನ್ನು ಮುಟ್ಟಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಬೆಸ್ಕಾಂ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.








