Sidlaghatta : ಸಾದಲಿ ಪಶು ಆಹಾರ ಘಟಕದ ನಿರ್ವಹಣೆಯನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳಿಗೆ ವಹಿಸಬೇಕು ಹಾಗೂ ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಘಟಕ ನಿರ್ವಹಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಎರಡೂ ಜಿಲ್ಲೆಗಳ ಹಾಲು ಉತ್ಪಾದಕರು ಶನಿವಾರ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಶು ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಘಟಕದ ಕಾರ್ಯನಿರ್ವಹಣೆ ಕುರಿತು ತನಿಖೆ ನಡೆಸಬೇಕು, ಹಾಲು ಉತ್ಪಾದಕರಿಗೆ ಗುಣಮಟ್ಟದ ಪಶು ಆಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಹಾಲು ಮಹಾಮಂಡಳಿಯ (KMF) ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಅವರ ಸಮ್ಮುಖದಲ್ಲಿ ನಡೆದ ಪ್ರತಿಭಟನೆಯಲ್ಲಿ ಎರಡೂ ಜಿಲ್ಲೆಗಳ ಹಾಲು ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ಭಾಗವಹಿಸಿದ್ದರು.
ಒಕ್ಕೂಟಗಳ ಆಕ್ಷೇಪ ಏನು?
ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ, ಸಾದಲಿ ಬಳಿ ಪಶು ಆಹಾರ ಘಟಕ ಸ್ಥಾಪಿಸಲು ಉದ್ದೇಶಿಸಿ ಒಕ್ಕೂಟದ ಹೆಸರಿನಲ್ಲಿ ಪಡೆದಿರುವ ಜಮೀನನ್ನು ಪಿಪಿಪಿ ಮಾದರಿಯ ಯೋಜನೆಗೆ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ಹಿಂದಿನ ಆಡಳಿತ ಮಂಡಳಿ ಕೈಗೊಂಡ ನಿರ್ಧಾರವನ್ನು ಮರುಪರಿಶೀಲಿಸಿ, ಘಟಕವನ್ನು ಖಾಸಗಿ ಸಹಭಾಗಿತ್ವದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
“ಪಶು ಆಹಾರದ ಗುಣಮಟ್ಟದ ಬಗ್ಗೆ ಈಗಾಗಲೇ KMF ನ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಎತ್ತಲಾಗಿದೆ. ಆಹಾರದ ಗುಣಮಟ್ಟ ಸುಧಾರಿಸದಿದ್ದರೆ ಹಾಲಿನ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಘಟಕವನ್ನು ಒಕ್ಕೂಟಗಳಿಗೆ ವಹಿಸಿದರೆ, ಅಗತ್ಯ ಬಂಡವಾಳ ಹೂಡಿ ರೈತರಿಗೆ ಗುಣಮಟ್ಟದ ಪಶು ಆಹಾರ ಒದಗಿಸಲು ಸಿದ್ಧರಿದ್ದೇವೆ” ಎಂದು ಅವರು ಹೇಳಿದರು.
ಸಾದಲಿ ಬಳಿಯ 26 ಎಕರೆ ಸರ್ಕಾರಿ ಜಮೀನನ್ನು ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಪಶು ಆಹಾರ ಘಟಕ ಸ್ಥಾಪನೆಗಾಗಿ ಪಡೆಯಲಾಗಿತ್ತು. 2017ರ ಸೆಪ್ಟೆಂಬರ್ 15ರಂದು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು ಎಂದು ನಂಜೇಗೌಡ ತಿಳಿಸಿದರು. ಜಮೀನನ್ನು KMF ಗೆ ವರ್ಗಾಯಿಸದೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಪಿಪಿಪಿ ಮಾದರಿಯ ಯೋಜನೆ ಜಾರಿಗೊಳಿಸುವಾಗ ಒಕ್ಕೂಟಗಳ ಅನುಮತಿ ಪಡೆದಿಲ್ಲ ಎಂಬುದು ಅವರ ಆಕ್ಷೇಪವಾಗಿದೆ.
ಜಮೀನಿನ ಗುತ್ತಿಗೆ ಷರತ್ತುಗಳನ್ನು ಪಾಲಿಸಿಲ್ಲ ಹಾಗೂ ಹಲವು ವರ್ಷಗಳಿಂದ ಬಾಡಿಗೆ ಪಾವತಿಯಾಗಿಲ್ಲ ಎಂದೂ ಅವರು ಆರೋಪಿಸಿದರು. ಈ ಬಗ್ಗೆ KMF ಅಧಿಕಾರಿಗಳು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಿಗದಿತ ಅವಧಿಯಲ್ಲಿ ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ, “KMF ಗೆ ನೂರಾರು ಕೋಟಿ ರೂಪಾಯಿ ಆದಾಯ ತಂದುಕೊಡುವ ಹಾಲು ಒಕ್ಕೂಟಗಳಿಗೆ ಪಶು ಆಹಾರ ಘಟಕವನ್ನು ಸ್ವತಃ ನಿರ್ವಹಿಸುವ ಸಾಮರ್ಥ್ಯವಿದೆ. ಖಾಸಗಿ ಸಹಭಾಗಿತ್ವದ ಬದಲು ಘಟಕವನ್ನು KMF ನೇರವಾಗಿ ನಿರ್ವಹಿಸಬೇಕು ಅಥವಾ ಎರಡೂ ಒಕ್ಕೂಟಗಳಿಗೆ ಹಸ್ತಾಂತರಿಸಬೇಕು” ಎಂದು ಒತ್ತಾಯಿಸಿದರು.
ಪಶು ಆಹಾರ ಘಟಕದಲ್ಲಿ ಕೋಳಿ ಆಹಾರ ತಯಾರಿಸಲಾಗುತ್ತಿದೆ ಎಂಬ ಆರೋಪವನ್ನೂ ಪ್ರಸ್ತಾಪಿಸಿದ ಅವರು, ಈ ಕುರಿತು KMF ನ ಸಾಮಾನ್ಯ ಸಭೆಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜುನಾಥ್ ರೆಡ್ಡಿ, KMF ನ ಮಾಜಿ ನಿರ್ದೇಶಕ ಕೆ.ವಿ. ನಾಗರಾಜ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಮಾತನಾಡಿದರು. ಚಿಕ್ಕಬಳ್ಳಾಪುರ ಒಕ್ಕೂಟದ ನಿರ್ದೇಶಕರಾದ ಭರಣಿ ವೆಂಕಟೇಶ್, ಉಲ್ವಾಡಿ ಬಾಬು, ಕೋಲಾರ ಒಕ್ಕೂಟದ ನಿರ್ದೇಶಕ ನಾಗರಾಜ್, ಬಂಕ್ ಮುನಿಯಪ್ಪ ಹಾಗೂ ಹುಜುಗೂರು ರಾಮಯ್ಯ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಏನಾಯಿತು?
ಸಾದಲಿ ಬಳಿಯ ಪಶು ಆಹಾರ ಘಟಕದಿಂದ ಕಳಪೆ ಪಶು ಆಹಾರ(ಫೀಡ್) ಪೂರೈಕೆ ಆಗುತ್ತಿರುವುದರ ವಿರುದ್ದ ನಡೆದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು, ನಿರ್ದೇಶಕರು, ನೂರಾರು ಮಂದಿ ಹೈನುಗಾರರು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸ್ಥಳಕ್ಕೆ ಬಂದ KMF ನ ವ್ಯವಸ್ಥಾಪಕ ನಿರ್ದೇಶಕ ಎಸ್.ಟಿ.ಸುರೇಶ್ ವಿರುದ್ದ ರೈತರು ಹರಿಹಾಯ್ದರು, ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜಾನುಕುಂಟೆ ಪಶು ಆಹಾರ ಘಟಕದಿಂದ ಪೂರೈಕೆಯಾದ ಕಳಪೆ ಆಹಾರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 45ಕ್ಕು ಹೆಚ್ಚು ಸೀಮೆ ಹಸುಗಳು ಮೃತಪಟ್ಟಿದ್ದು ನೀವೇನು ಕಣ್ಣು ಮುಚ್ಚಿ ಕುಳಿತಿದ್ರಾ ಎಂದು ಪ್ರಶ್ನಿಸಿದ ರೈತರು, ಇದೀಗ ಸಾದಲಿ ಪಶು ಆಹಾರ ಘಟಕದಲ್ಲಿ ಕಳಪೆ ಪಶು ಆಹಾರ ಪೂರೈಕೆಯಾಗಿ ಇಲ್ಲೂ ಸೀಮೆ ಹಸುಗಳನ್ನು ಸಾಯಿಸಿ ರೈತರನ್ನು ಬೀದಿಗೆ ತಳ್ಳಬೇಕು ಎಂದು ಕಾದಿದ್ದೀರಾ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಪ್ರಸ್ತಾಪವಾದ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ನೀಡಲು ಮುಂದಾದಾಗ ರೈತರ ತೀವ್ರ ವಿರೋಧ ವ್ಯಕ್ತವಾಯಿತು, ವೇದಿಕೆ ಮೇಲಿದ್ದ ಮುಖಂಡರ ಕೋರಿಕೆ ಮೇರೆಗೆ ರೈತರು ಸುಮ್ಮನಾದರು. ನಂತರ KMF ನ MD ಎಸ್.ಟಿ.ಸುರೇಶ್ ಅವರು ಕಳಪೆ ಪಶು ಆಹಾರ ಪೂರೈಕೆ ಬಗ್ಗೆ ಕ್ಷಮೆ ಕೋರಿದರು.
ಕಳಪೆ ಪಶು ಆಹಾರ ಪೂರೈಕೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ಇನ್ನುಳಿದ ಎಲ್ಲ ಅಂಶಗಳನ್ನು KMF ನ ಅಳಿತ ಮಂಡಳಿಯಲ್ಲಿ ಪ್ರಸ್ತಾಪಿಸಿ ಪರಿಹರಿಸುವ ಭರವಸೆ ನೀಡಿದರು.
In English: Milk producers of Kolar and Chikkaballapura districts laid siege to the cattle feed unit near Sadali on Saturday, demanding that its management be handed to the two district milk unions and that the decision to run it on a PPP (public-private partnership) model be withdrawn, and complaining about the quality of the feed. Kolar union president K.Y. Nanjegowda alleged that land obtained in the union’s name was used for a PPP project without its permission, that lease conditions were not followed and that rent had not been paid for years; former KMF director K.V. Nagaraj alleged poultry feed was being made at the unit. Protesting farmers claimed that poor feed from another unit had killed over 45 cows in Bengaluru Rural district; KMF MD S.T. Suresh apologised for the supply of poor feed and promised an inquiry and action against those found guilty. These are the protesters’ allegations.








