Sadali, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದ ಸಾದಲಮ್ಮ ದೇವಿ ದೇವಾಲಯದ ಆವರಣದಲ್ಲಿ ಸಂರಕ್ಷಿಸಿಡಲಾಗಿರುವ ಚೋಳರ ಕಾಲದ ತಮಿಳು ಶಾಸನವೊಂದು ಈ ದೇವಾಲಯ ಸಾವಿರ ವರ್ಷಗಳಷ್ಟು ಹಳೆಯದು ಎಂಬುದಕ್ಕೆ ಪುರಾವೆಯಾಗಿದೆ. ಕ್ರಿ.ಶ. 1044ರ ಫೆಬ್ರುವರಿಯಲ್ಲಿ ಚೋಳ ದೊರೆ ಮೊದಲನೇ ರಾಜಾಧಿರಾಜನ ಆಳ್ವಿಕೆಯ 26ನೇ ವರ್ಷದಲ್ಲಿ ಕೆತ್ತಲಾದ ಈ ಶಾಸನ, ಸಾದಲಮ್ಮ ಹಾಗೂ ಬ್ರಹ್ಮೀಶ್ವರ ದೇವರ ಸೇವೆಗಾಗಿ ಭೂದಾನ ನೀಡಿದ ವಿವರಗಳನ್ನು ಒಳಗೊಂಡಿದೆ.
ಶಾಸನದಲ್ಲಿ ಏನಿದೆ?
ರಾಜಾಧಿರಾಜ ಚೋಳನ ಅಧೀನದಲ್ಲಿ ಸಾದಲಿನಾಡಿನ ಆಡಳಿತಗಾರನಾಗಿದ್ದ ಇರುಗಯ್ಯಗಾಮುಂಡನ ಮಗ ಅಳಗಿಯಚೋಳಗಾಮುಂಡನು, ಗಂಗಿಮಯ್ಯನ ಮಗ ಮಾದತ್ತಿಡಯ್ಯ ಎಂಬ ಶಿವ ಬ್ರಾಹ್ಮಣನಿಗೆ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗಳ ಕಾಲುವೆ ವ್ಯಾಪ್ತಿಯ ಕೆಲವು ಗದ್ದೆಗಳನ್ನು ದೇವಭೋಗವಾಗಿ ನೀಡಿದ ವಿವರ ಈ ಶಾಸನದಲ್ಲಿದೆ. ಶಾಸನವನ್ನು ಶಾಸನತಜ್ಞ ಕೆ.ಧನಪಾಲ್ ಹಾಗೂ ಡಿ.ಎನ್.ಸುದರ್ಶನರೆಡ್ಡಿ ಸೇರಿದಂತೆ ವಿದ್ವಾಂಸರ ತಂಡ ಓದಿ ಅರ್ಥೈಸಿ, ಕನ್ನಡಕ್ಕೆ ತರ್ಜುಮೆ ಮಾಡಿ ಭಿತ್ತಿಪತ್ರದ ರೂಪದಲ್ಲಿ ದೇವಾಲಯದ ಆವರಣದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.
ರಾಜಾಧಿರಾಜ ಚೋಳ ಯಾರು?
ರಾಜಾಧಿರಾಜ ಚೋಳ ಚೋಳರ ಪ್ರಖ್ಯಾತ ರಾಜ ರಾಜರಾಜಚೋಳನ ಮಗ ರಾಜೇಂದ್ರ ಚೋಳನ ಹಿರಿಯ ಮಗ. 11ನೇ ಶತಮಾನದಲ್ಲಿ ದಕ್ಷಿಣ ಕರ್ನಾಟಕವನ್ನು ಆಳಿದ ಚೋಳ ವಂಶದ ಈತನ ಕಾಲದಲ್ಲಿಯೇ ಭೋಗನಂದೀಶ್ವರ ದೇವಾಲಯ ಹಾಗೂ ದೇವನಹಳ್ಳಿ ತಾಲ್ಲೂಕಿನ ಗಂಗವಾರದ ಸೋಮೇಶ್ವರ ದೇವಾಲಯಗಳ ಜೀರ್ಣೋದ್ಧಾರ ನಡೆದಿತ್ತು. ಈತನ ನಂತರ ಬಂದ ಕುಲೋತ್ತುಂಗ ಚೋಳ ಹಾಗೂ ವಿಕ್ರಮಚೋಳರೂ ಶಿಡ್ಲಘಟ್ಟ ತಾಲ್ಲೂಕಿನ ಚಿಲಕಲನೇರ್ಪು, ನಂದನವನ, ಸುಗಟೂರುಗಳಲ್ಲಿ ಶಿವಾಲಯಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಮಾಡಿಸಿದ್ದಾರೆ.
ಸುತ್ತಮುತ್ತಲಿನ ಇತರ ಪುರಾತನ ಸ್ಮಾರಕಗಳು
ಸಾದಲಿ ಗ್ರಾಮದ ಪೆದ್ದಗುಡಿ (ಲಕ್ಷ್ಮೀಚನ್ನಕೇಶವ ದೇವಸ್ಥಾನ) ಹಾಗೂ ಸಾದಲಿಯ ಸುತ್ತಮುತ್ತ 25ಕ್ಕೂ ಹೆಚ್ಚು ವೀರಗಲ್ಲುಗಳಿದ್ದು, ಇವುಗಳ ಸಂರಕ್ಷಣೆಗೂ ಗ್ರಾಮಸ್ಥರು ಮುಂದಾಗಿದ್ದಾರೆ. ಸ್ಥಳೀಯರು ಈ ಶಾಸನ ಕಲ್ಲನ್ನೂ ಹಿಂದಿನಿಂದಲೂ ದೇವರ ರೀತಿಯಲ್ಲಿಯೇ ಪೂಜಿಸುತ್ತಾ ಬಂದಿದ್ದಾರೆ.
ದಾರಿ ಹೇಗೆ ಸಾಗುವುದು?
ಗೂಗಲ್ ಮ್ಯಾಪ್‌ನಲ್ಲಿ ದಾರಿ ವೀಕ್ಷಿಸಿ / Get Directions on Google Maps
ಶಿಡ್ಲಘಟ್ಟ ತಾಲ್ಲೂಕಿನ ಇನ್ನಿತರ ಪ್ರವಾಸಿ ತಾಣಗಳಾದ ಕುಂದಲಗುರ್ಕಿ ಬೆಟ್ಟದ ಶ್ರೀ ವರದಾಂಜನೇಯಸ್ವಾಮಿ ದೇವಾಲಯ ಮತ್ತು ರಾಮಲಿಂಗೇಶ್ವರ ಬೆಟ್ಟದ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯ ಕುರಿತ ವಿವರವನ್ನೂ ನೋಡಿ.
In English: Sadalamma Devi Temple in Sadali village, Sidlaghatta taluk, preserves a Tamil-language Chola-era inscription dated February 1044 CE, from the 26th regnal year of Rajadhiraja Chola I, recording a land grant for the temple’s and Brahmeshwara deity’s service — evidence the temple is roughly a thousand years old. Nearby, the village’s Peddagudi (Lakshmi Chennakeshava temple) and over 25 hero stones (veeragallu) are also being conserved by local residents.








