ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿಯ ಬೈರಗಾನಗಳ್ಳಿಯ ರುದ್ರಭೂಮಿಗೆ ಸೇರಿರುವ ಎರಡು ಎಕರೆ ಪ್ರದೇಶದಲ್ಲಿ ಎನ್ ಸೈಡ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶನಿವಾರ ರೀಫಾರೆಸ್ಟ್ ಸಂಸ್ಥೆ, ಗ್ರಾಮಾಂತರ ಟ್ರಸ್ಟ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸುಮಾರು 500 ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ರೀಫಾರೆಸ್ಟ್ ಸಂಸ್ಥೆಯ ಜನೆತ್ ಯಜ್ಞೇಶ್ವರನ್ ಮಾತನಾಡಿದರು.
ಸುಮಾರು 500 ವಿವಿಧ ಗಿಡಗಳನ್ನು ರುದ್ರಭೂಮಿಯ ಸ್ಥಳದಲ್ಲಿ ನೆಡುತ್ತಿದ್ದು, ಮುಂದೆ ಈ ಗಿಡಗಳು ಮರಗಳಾಗಿ ಆಮ್ಲಜನಕದ ಕಾರ್ಖಾನೆಗಳಂತೆ ಕೆಲಸ ಮಾಡುತ್ತವೆ ಎಂದು ಅವರು ತಿಳಿಸಿದರು.
ನೀರಿನ ಅನುಕೂಲವಿರುವ ಸರ್ಕಾರಿ ಸ್ಥಳಗಳಲ್ಲಿ ನಾವು ವಿವಿಧ ಗಿಡಗಳನ್ನು ನೆಡುತ್ತಿದ್ದೇವೆ. ಗ್ರಾಮ ಪಂಚಾಯಿತಿಯವರು ಈ ಗಿಡಗಳನ್ನು ಆರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಎರಡು ಮೂರು ವಾರದೊಳಗೆ ಇದೇ ಗ್ರಾಮದ ಇನ್ನೊಂದು ರುದ್ರಭೂಮಿಯ ಸ್ಥಳದಲ್ಲಿಯೂ 500 ಗಿಡಗಳನ್ನು ನೆಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಆಲ, ತಪಸಿ, ಆಕಾಶಮಲ್ಲಿಗೆ, ಅರಳಿ, ಹಿಪ್ಪೆ, ಮುತ್ತುಗ, ಹೂವರಸಿ, ಚೆರ್ರಿ, ಸೀಬೆ, ಮಾವು, ನೇರಳೆ, ಅಶೋಕ, ಗುಲ್ ಮೊಹರ್, ಹೊಂಗೆ, ಸಂಪಿಗೆ ಮೊದಲಾದ ಜಾತಿಯ ಗಿಡಗಳನ್ನು ನೆಡಲಾಯಿತು.
ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ನಾಗರಾಜ್, ಸದಸ್ಯರಾದ ಮಧು, ರಾಜೇಶ್, ನಾರಾಯಣಸ್ವಾಮಿ, ಕರವಸೂಲಿಗಾರ ಶ್ರೀನಾಥ ರೆಡ್ಡಿ ಹಾಜರಿದ್ದರು.